ಬೆಳಂದೂರು: ಜನರಿಂದ ಆಳ್ವಿಕೆಯಾಗುವ ಈ ಸಮಾಜವು ಸಶಕ್ತವಾಗಬೇಕಾದರೆ ನಮ್ಮನ್ನು ಆಳುತ್ತಿರುವ ಸರ್ಕಾರ ಮತ್ತು ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಸಚ್ಚಾರಿತ್ರರಾಗಿರಬೇಕು. ಅಂತಹ ವ್ಯಕ್ತಿಗಳಿಗೆ ನಾವು ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಲಕ್ಷ್ಮೀಕಾಂತ ರೈ ಅನಿಕೂಟೇಲು ಹೇಳಿದರು.

ಅವರು ಕಡಬ ತಾಲೂಕಿನ ಬೆಳಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕ ಹಾಗೂ ಪುತ್ತೂರು ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಮತದಾನ ಮಾಡುವ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರನ್ನು ಮತದಾನ ಮಾಡುವಂತೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕರೆ ನೀಡಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿ, ಪುತ್ತೂರು ತಾಲೂಕು ಮಟ್ಟದ ಸ್ವೀಪ್ ಸಮಿತಿ ತರಬೇತುದಾರೆ ಹಾಗೂ ನರಿಮೊಗರು ಕ್ಲಸ್ಟರ್ ನ ಸಿ. ಆರ್. ಪಿ. ಪರಮೇಶ್ವರಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಜೆಗಳ ರಾಜಕೀಯ ಹಕ್ಕಾಗಿದ್ದು, ಜೊತೆಗೆ ಕರ್ತವ್ಯವೂ ಆಗಿದೆ. ಅದನ್ನು ಪ್ರತಿಯೊಬ್ಬ ಅರ್ಹ ಮತದಾರ ಅರ್ಥ ಮಾಡಿಕೊಂಡು ತಪ್ಪದೇ ಮತದಾನ ಮಾಡುತ್ತೇನೆಂಬ ಪ್ರತಿಜ್ಞೆಯನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರ್ ಭಟ್ ಪಿ. ಮಾತನಾಡಿ, ವಿದ್ಯಾರ್ಥಿಗಳೆಲ್ಲರೂ ತಪ್ಪದೇ ಮತದಾನ ಮಾಡುವ ಜೊತೆಗೆ ಸಮಾಜದ ಎಲ್ಲರೂ ಮತದಾನ ಮಾಡುವಂತೆ ಪ್ರೆರೇಪಿಸಬೇಕು ಎಂದರು.
ಐಕ್ಯೂಎಸಿ ಘಟಕದ ಸಂಯೋಜಕ ಸ್ವಾಮಿ ಎಸ್. ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಹರಿಣಾಕ್ಷಿ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.