ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ, ಆದಾಯ ಮೀರಿದ ಸಂಪತ್ತು ಗಳಿಸಿರುವ ಮಾಹಿತಿಯಂತೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 13 ಜಿಲ್ಲೆಗಳಲ್ಲಿ 60 ಕಡೆಗಳಲ್ಲಿ ಏಕಕಾಲದಲ್ಲಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿ ಚೀಫ್ ಇಂಜಿನಿಯರ್ ರಂಗನಾಥ್ ಮನೆ ಸೇರಿ ಹಲವು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಮುಂಜಾನೆಯೇ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ರಂಗನಾಥ್ ಅವರಿಗೆ ಸೇರಿದ ಸದಾಶಿವನಗರ ಹಾಗೂ ಯಲಹಂಕ ಮನೆ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಾರವಾರದಲ್ಲಿ ಕೂಡ ಬೆಳ್ಳಂಬೆಳಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಪ್ರಕಾಶ್ ಆರ್. ರೇವಣಕರ್ ಎಂಬವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ರಾಮನಗರ ತಾಲೂಕಿನ ಮಂಚನಾಯಕನಹಳ್ಳಿ ಪಿಡಿಒ ಯತೀಶ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ, ಮೈಸೂರಿನ ನಿವಾಸ, ಹಾಗೂ ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿನ ಪ್ಲಾಟ್ ಮೇಲೆ ಕೂಡ ಏಕಕಾಲದಲ್ಲಿ ದಾಳಿ ನಡೆದಿದೆ.
ಚನ್ನಪಟ್ಟಣದಲ್ಲಿ ಕೂಡ ಪಿಡಿಒ ಮನೆ ಮೇಲೆ ದಾಳಿಯಾಗಿದೆ. ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಪಂ ಪಿಡಿಒ ಶಿಬಾ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಕಳೆದ ಒಂದುವರೆ ತಿಂಗಳಿನಿಂದ ಪಿಡಿಒ ಶಿಬಾ ರಜೆಯಲ್ಲಿದ್ದು, ಅಕ್ರಮ ಆಸ್ತಿಗಳಿಕೆ ಆರೋಪ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ.