ಪುತ್ತೂರು: ನಾವು ತಾದಾತ್ಮ್ಯದಿಂದ ದೇವರನ್ನು ನಂಬಿಕೊಂಡು ಹೋದರೆ ಯಾವುದೇ ಸಂದರ್ಭದಲ್ಲಿ ದೇವರು ಅನುಗ್ರಹ ಮಾಡುತ್ತಾನೆ ಎಂದು ಎಡನೀರು ಮಠಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ನುಡಿದರು.
ಅವರು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಜನರಿಗೆ ಬಹಳ ಹತ್ತಿರವಾದ ಸ್ವಾಮಿ ಜನಾರ್ದನ ಸ್ವಾಮಿ. ಪ್ರಸ್ತುತ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಮಧ್ಯ ವಯಸ್ಸಿನ ಪುರುಷರು, ಮಹಿಳೆಯರನ್ನು ನಾವು ಕಾಣಸಲು ಅಸಾಧ್ಯ. ಹೀಗಾದಲ್ಲಿ ಮುಂದಿ ಪೀಳಿಗೆಗೆ ನಮ್ಮ ಧರ್ಮ, ಧಾರ್ಮಿಕ ಆಚರಣೆಗಳನ್ನು ತಲುಪಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಮನೆಯ ಹಿರಿಯರು ತಮ್ಮ ಮಕ್ಕಳನ್ನು ಇಂತಹಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸುವಂತೆ ಮಾಡಿ ಧಾರ್ಮಿ ಕಾರ್ಯಕ್ರಮಗಳ ಅರಿವು ಮೂಡಿಸಿದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ನುಡಿದ ಅವರು, ದೇವರಲ್ಲಿ ದೃಢವಾದ ಭಕ್ತಿಯಿಲ್ಲದಿದ್ದರೆ ಮುಕ್ತಿ ಪಡೆಯಲು ಅಸಾಧ್ಯ. ದೇವರಲ್ಲಿ ದೃಢವಾದ ಭಕ್ತಿ ನಮ್ಮ ಕರ್ಮವಾಗಿರಬೇಕು. ಇದಕ್ಕೆ ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯಗಳು ಸಹಕಾರಿಯಾಗುತ್ತದೆ ಎಂದು ನುಡಿದರು.
ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ, ಬ್ರಹ್ಮಕಲಶೋತ್ದವದಂತಹ ಪುಣ್ಯ ಕಾರ್ಯ ಭವಂತನಿಗೆ ಅರ್ಪಿಸುವ ವಿಶಿಷ್ಟ ದಿನ. ಈ ಸಂದರ್ಭದಲ್ಲಿ ನಾವೆಲ್ಲರೂ ಭಗವತ್ ಚಿಂತನೆ ಮಾಡಿದರೆ ದೇವರ ಮಹಿಮೆಯನ್ನು ಅರಿಯಲು ಸಾಧ್ಯ ಎಂದ ಅವರು, ಮನುಷ್ಯ ಆರೋಗ್ಯ ಕೆಟ್ಟರೆ ಡಾಕ್ಟರ್ ಹೇಳಿ ತೆರಳುತ್ತಾನೋ ಹಾಗೆಯೇ ದೇವಾಲಯದ ಆರೋಗ್ಯ ಕೆಟ್ಟರೆ ಜೀರ್ಣೋದ್ಧಾರ ಎಂಬ ಪುಣ್ಯ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇವೆ ಎಂದರು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ಅರಮನೆಯ ಬಂಗಾರು ಅರಸರು, ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್, ಮೈಸೂರು ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕ ದಿವಾಕರ ದಾಸ್ ನೇರ್ಲಾಜೆ, ಉದ್ಯಮಿ ಸಂತೋಷ್ ನಾಯ್ಕ್, ಉದ್ಯಮಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಸಂದೀಪ್‍ನಾಯ್ಕ್‍ಪಾಲ್ಗೊಂಡು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರು ಸೌಂದರ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಸೌಂದರ್ಯ ಮಂಜಪ್ಪ ಪಿ. ವಹಿಸಿದ್ದರು. ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ, ವೇದಮೂರ್ತಿ ಶ್ರೀಧರ ಭಟ್ ಕಬಕ, ಅಭಿವೃದ್ಧಿ ಸಮಿತಿ ಕೋಶಾಧಿಕಾರಿ ಜನಾರ್ದನ ಎರ್ಕಡಿತ್ತಾಯ, ಪವಿತ್ರಪಾಣಿ ಹೇಮಂತ ಮೂರ್ತಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧೀರಜ್ ಹಿರ್ಕುಡೇಲು ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣರಾಜ ಎರ್ಕಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ ಜೋಯಿಸ ಶಾಸ್ತಾವನ, ಕಾರ್ಯದರ್ಶಿ ಮನೋಹರ ನಾಯ್ಕ್‍ಕೊಳಕ್ಕಿಮಾರ್, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮಹಾಬಲ ಗೌಡ ಗಡಿಮಾರು, ಉತ್ಸವ ಸಮಿತಿ ಕಾರ್ಯದರ್ಶಿ ಗಿರಿಧರ್ ಜಿ.ಗೋಮುಖ ಉಪಸ್ಥಿತರಿದ್ದರು.
ಉತ್ಸವ ಸಮಿತಿ ಅಧ್ಯಕ್ಷ ಸುಧೀರ್ ಪ್ರಸಾದ್ ಆನಾಜೆ ಸ್ವಾಗತಿಸಿದರು. ಮನ್ಮಥ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೊಡಿಪಾಡಿ ಗ್ರಾಮದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.