ಮೇಲಿನ ಮುಕ್ಕೂರು ತರವಾಡು ಕ್ಷೇತ್ರ : ಜೀರ್ಣೋದ್ಧಾರದ ಪೂರ್ವಭಾವಿ ಸಭೆ | ಎ.18 : ಗಣಹೋಮ, ಮೃತ್ಯುಂಜಯ ಹೋಮ, ಸತ್ಯನಾರಾಯಣ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ

ಮುಕ್ಕೂರು : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿಗಳ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ಅಷ್ಟಮಂಗಲ ಚಿಂತನೆಯ ಪ್ರಕಾರ ಊರವರ ಸಹಕಾರದೊಂದಿಗೆ ಸ್ಥಳ ಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಸಂಕಲ್ಪ ತೊಡಲಾಗಿದ್ದು ಇದರ ಭಾಗವಾಗಿ ಶ್ರೀ ಕ್ಷೇತ್ರದಲ್ಲಿ ಎ.18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಮುಖ್ಯಸ್ಥ ಮೋಹನ ಬೈಪಡಿತ್ತಾಯ, ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ ಅವರು  ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ಮಾ.24 ರಂದು ಸಂಜೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ವಠಾರದಲ್ಲಿ ನಡೆದ ಭಕ್ತವೃಂದದ ಪೂರ್ವಭಾವಿ ಸಭೆಯಲ್ಲಿ ವಿವರ ನೀಡಿದರು.

ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತಹ ದೋಷ ನಿವೃತ್ತಿಗಾಗಿ ಏ.18 ರಂದು ಬೆಳಗ್ಗೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ಪವಮಾನ ಹೋಮ, ಸತ್ಯನಾರಾಯಣ ಪೂಜೆ, ದ್ವಾದಶ ಮೂರ್ತಿ ಆರಾಧನೆ, ರಾತ್ರಿ ದುರ್ಗಾಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಭಕ್ತರು ಪಾಲ್ಗೊಳ್ಳುವಂತೆ ಮೋಹನ ಬೈಪಡಿತ್ತಾಯ ಹಾಗೂ ಸಹೋದರರು ಹೇಳಿದರು.































 
 

ಎ.17: ಬಲಿವಾಡು, ತರಕಾರಿ ಸಮರ್ಪಿಸಲು ಅವಕಾಶ

ಎ.17 ರಂದು ಭಕ್ತರು ಬಲಿವಾಡು, ತರಕಾರಿ ಸಹಿತ ಸುವಸ್ತುಗಳ ಸಮರ್ಪಿಸಲು ಅವಕಾಶ ಇದೆ. ಈ ವೇಳೆ ತುಳಸಿ ಸಹಿತ ಹೂವು ಅರ್ಪಿಸುವಂತೆ ವಿನಂತಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಎ.18 ರಂದು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಕರಸೇವೆಯ ಸಂಕಲ್ಪ:

ಅಷ್ಟಮಂಗಲ ಪ್ರಶ್ನಾಚಿಂತನೆ ಪ್ರಕಾರ ವಿವಿಧ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದ್ದು ಊರ ಭಕ್ತವೃಂದವು ಕರಸೇವೆ ಮೂಲಕ ಕೈ ಜೋಡಿಸಲು ನಿರ್ಧಾರ ಕೈಗೊಳ್ಳಲಾಯಿತು. ಎ.18 ರ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಅಂಗಲಕ್ಕೆ ಸಾಂಪ್ರದಾಯಿಕ ಶೈಲಿಯ ಚಪ್ಪರದ ವ್ಯವಸ್ಥೆಯನ್ನು ಊರ ಭಕ್ತವೃಂದವು ಕರಸೇವೆಯ ಮೂಲಕ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ನಾಗ ನೀರು ಕುಡಿಯಲು ಬರುವ ಸಣ್ಣ ಕೆರೆಯೊಂದಿದ್ದು ಅಲ್ಲಿ ಪಾವಿತ್ರ್ಯತೆಯ ದೃಷ್ಟಿಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಕಂಡು ಬಂದಿತ್ತು. ಮಾ.24 ರಂದು ಕೆರೆಯ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಈ ವೇಳೆ ಕೆರೆಯಲ್ಲೇ ಸಾಕ್ಷಾತ್ ನಾಗ ಪ್ರತ್ಯಕ್ಷಗೊಂಡ ಘಟನೆಯು ನಡೆಯಿತು.

ಸಭೆಯಲ್ಲಿ ಸುಧೀರ್ ಕೊಂಡೆಪ್ಪಾಡಿ, ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ಪುರುಷೋತ್ತಮ ಗೌಡ ಕಾಯರ್ ಮಾರ್, ಸುಧೀರ್ ರೈ ಕುಂಜಾಡಿ, ನಾರಾಯಣ ಕೊಂಡೆಪ್ಪಾಡಿ, ಸಂಜೀವ ಗೌಡ ಬೈಲಂಗಡಿ, ಜಯಂತ ಗೌಡ ಕುಂಡಡ್ಕ, ಸಚಿನ್ ರೈ ಪೂವಾಜೆ, ಕುಶಾಲಪ್ಪ ಗೌಡ ಅಡ್ಯತಕಂಡ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಪೂವಪ್ಪ ನಾಯ್ಕ ಅಡೀಲು, ಲಿಂಗಪ್ಪ ಗೌಡ ಸಹಿತ ಹಲವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top