ಬಂಟ್ವಾಳ: ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರವಾಹನಗಳ ಮೇಲೆ ಘನಗಾತ್ರದ ಲಾರಿಯೊಂದು ಹರಿದು ಬೈಕಗಳು ಅಪ್ಪಚ್ಚಿಯಾದ ಘಟನೆ ಬೆಂಜನಪದವು ಸಮೀಪದ ಕೊಡ್ಮಾನ್ ಕೋಡಿ ಎಂಬಲ್ಲಿ ನಡೆದಿದೆ.
ಬೆಂಜನಪದವು ಗುಡ್ಡವೊಂದಕ್ಕೆ ಬಂದಿದ್ದ ಕಾರೊಂದು ಚಾಲಕನ ಎಡವಟ್ಟಿನಿಂದ ಗುಂಡಿಗೆ ಬಿದ್ದಿತ್ತು. ಗುಂಡಿಗೆ ಬಿದ್ದ ಕಾರನ್ನು ಎತ್ತಿ ಮೇಲೆಕ್ಕೆ ತರುವ ಉದ್ದೇಶದಿಂದ ಕಾರು ಮಾಲಕನಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಎರಡು ಬೈಕ್ ಗಳಲ್ಲಿ ಬಂದ ಯುವಕರು ಬೈಕನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಕಾರುನ್ನು ಎತ್ತಲು ಹೋದ ವೇಳೆ ಬೆಂಜನಪದವು ಕಡೆಯಿಂದ ಮಾರಿಪಳ್ಳ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಬೈಕಗಳ ಮೇಲೆ ಹರಿದಿದೆ.

ಲಾರಿ ಬೈಕುಗಳ ಮೇಲೆ ಹರಿದ ಪರಿಣಾಮವಾಗಿ ಬೈಕುಗಳು ಸಂಪೂರ್ಣ ಜಖಂಗೊಂಡಿದೆ. ಬೈಕ್ ತನ್ನ ಮೂಲ ಆಕಾರವನ್ನು ಕಳೆದುಕೊಂಡು ಮುದ್ದೆಯಾಗಿದೆ.
ಬೆಂಜನಪದವು ಕಡೆಯಿಂದ ತಮಿಳುನಾಡಿಗೆ ಮಣ್ಣು ಸಾಗಾಟ ಮಾಡುವ ತಮಿಳುನಾಡು ಮೂಲದ ಬೃಹತ್ ಗಾತ್ರದ ಲಾರಿ,ಮಣ್ಣು ತುಂಬಿಸಿಕೊಂಡು ಬೆಂಜನಪದವು ಕಡೆಯಿಂದ ಬಿಸಿರೋಡಿನ ಕೈಕಂಬ ರಸ್ತೆಗೆ ತೆರಳಬೇಕಿತ್ತು. ಚಾಲಕನಿಗೆ ರಸ್ತೆಯ ಅಂದಾಜು ಇಲ್ಲದೆ, ದಾರಿ ತಪ್ಪಿ ಮಾರಿಪಳ್ಳ ರಸ್ತೆಯಲ್ಲಿ ಸಾಗಿದ್ದಾನೆ. ಅಧಿಕ ಲೋಡ್ ಹೊಂದಿದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳೆರಡನ್ನು ಎಳೆದುಕೊಂಡು ಹೋಗಿ ಪುಡಿಪುಡಿ ಮಾಡಿದೆ.
ಸ್ಥಳದಲ್ಲಿ ಪೋಲೀಸ್ ವಾಹನ ಹಾಗೂ ಎ.ಎಸ್.ಐ. ಮೋನಪ್ಪ ಗೌಡ ಭೇಟಿ ನೀಡಿದ್ದಾರೆ.