ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢ ಶಾಲೆ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ಮಾ.23 ರಂದು ನಡೆಯಿತು.
ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸಮಾಜದಲ್ಲಿ ನೊಂದವರ ಕಣ್ಣೀರೊರೆಸುತ್ತಿದ್ದ ಶಾಸಕ ಅಶೋಕ್ ರೈ ಯವರು ಶಾಸಕರಾದ ಬಳಿಕ ಎಲ್ಲಾ ರಂಗದಲ್ಲೂ ತನ್ನ ಸೇವೆ ಯನ್ನು ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಇವತ್ತಿನ ಕಾರ್ಯಾಗಾರ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.
ಟ್ರಸ್ಟ್ ಸದಸ್ಯ, ಪುಡಾ ಸದಸ್ಯ ನಿಹಾಲ್ ಶೆಟ್ಟಿ ಮಾತನಾಡಿ, ಕಲಿಯುವ ಮನಸ್ಸು ಇರುವ ಪ್ರತೀಯೊಬ್ಬರಿಗೂ ಸಾಕಷ್ಟು ಅವಕಾಶಗಳು ಇದೆ. ಮಾಹಿತಿಯ ಕೊರತೆಯಿಂದ ನಾವು ಕೆಲವೊಂದನ್ನು ಕಳೆದುಕೊಳ್ಳುತ್ತಿದ್ದೇವೆ. ಕಲಿಕೆಯ ವಿಚಾರದಲ್ಲಿ ನಾವು ಎಷ್ಟೇಮಾಹಿತಿ ಪಡೆದುಕೊಂಡರೂ ಅದು ಕಡಿಮೆಯೇ ಎಂದು ಹೇಳಿದರು.
ಬೆಳ್ಳಾರೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿವಿ ಸೂರ್ಯನಾರಾಯಣ ಕಾರ್ಯಾಗಾರ ನಡೆಸಿದರು. ವೇದಿಕೆಯಲ್ಲಿ ಟ್ರಸ್ಟಿನ ಸದಸ್ಯ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ, ತರಬೇತುದಾರೆ ಶ್ರದ್ದಾ ಉಪಸ್ಥಿತರಿದ್ದರು.
ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮನಿರೂಪಿಸಿ ವಂದಿಸಿದರು.