ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಂತೂರಿನಲ್ಲಿ ನಡೆದಿದೆ.
ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ (29) ಮೃತಪಟ್ಟವರು.
ಶಮಿತ್ ನಿನ್ನೆ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ದೈವದ ಕೋಲವೊಂದರಲ್ಲಿ ಪಾಲ್ಗೊಂಡು ತೊಕ್ಕೊಟ್ಟಿನ ಮನೆಗೆ ಕಾರಿನಲ್ಲಿ ಹಿಂತಿರುಗುತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ ಮುರಿದು ಹೋಗಿದೆ. ಈ ಕುರಿತು ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಲಿತಾ ಅವರ ಏಕೈಕ ಮಗ ಸಂತೋಷ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೊಮ್ಮಗ ಶಮಿತ್ ಬಾಲ್ಯದಿಂದಲೇ ತಾಯಿ, ಅಜ್ಜಿಯ ಆರೈಕೆಯಲ್ಲಿ ಬೆಳದಿದ್ದು, ಶಮಿತ್ ಗೆ ಮದುವೆ ಮಾಡಲು ವಧುವಿನ ಅನ್ವೇಷಣೆಯಲ್ಲಿದ್ದರು ಎಂದು ತಿಳಿದು ಬಂದಿದೆ.