ಪುತ್ತೂರು: ಚುನಾವಣೆ ಸಂದರ್ಭದಲ್ಲಿ ರೈತರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದ ಕೋವಿಗಳನ್ನು ಠೇವಣಿ ಇರಿಸಲು ಆದೇಶ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಠೇವಣಿ ಇಡಲು ವಿನಾಯಿತಿ ನೀಡಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ಈಗಾಗಲೇ ಕೇರಳ ರಾಜ್ಯದ ಹೈಕೋರ್ಟ್ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡುವ ವಿಚಾರದಲ್ಲಿ ವಿನಾಯಿತಿ ನೀಡಿದೆ. ಕಳೆದ ಬಾರಿಯೂ ಚುನಾವಣಾ ಸಂದರ್ಭದಲ್ಲಿ ವಿನಾಯಿತಿ ನೀಡುವಂತೆ ನಮ್ಮ ಸಂಘದಿಂದ ಮನವಿ ನೀಡಿದ್ದೆವು. ಆದರೆ ವಿನಾಯಿತಿ ನೀಡಲಾಗಿಲ್ಲ.
ಕಾಡು ಪ್ರಾಣಿಗಳು, ಕಳ್ಳರ ಭಯದಿಂದ ತಮ್ಮನ್ನು ರಕ್ಷಣೆ ಮಾಡಲು ರೈತರಿಗೆ ಸಮಸ್ಯೆ ಉಂಟಾಗುತ್ತಿದೆ. ಪರವಾನಿಗೆ ಪಡೆಯದೇ ಇರಿಸಿಕೊಂಡ ಆಯುಧಗಳನ್ನು, ಕಳ್ಳದಂಧೆ ನಡೆಸುವವರ, ದರೋಡೆಕೋರರ ಕೋವಿಗಳನ್ನು ಬೇಕಾದರೆ ಠೇವಣಿ ಇರಿಸಿ ಎಂದು ಒತ್ತಾಯಿಸಿರುವ ಸಂಘ, ದ.ಕ.ಜಿಲ್ಲೆಯಲ್ಲಿ ಸಂಬಂಧ ಪಟ್ಟ ಪೊಲೀಸ್ ಇಲಾಖೆಗಳ ವ್ಯಾಪ್ತಿಯ ರೈತರಿಗೆ ವಿನಾಯಿತಿ ನೀಡುವಂತೆ ಸಂಘದ ಪರವಾಗಿ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಬೈಲುಗುತ್ತು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.