ಆಲಂಕಾರು: ಕಡಬ ತಾಲೂಕಿನ ಆಲಂಕಾರು- ಸವಣೂರು ಸಂಪರ್ಕ ರಸ್ತೆಯಲ್ಲಿ ಬರುವ ಶಾಂತಿಮೊಗರು ಎಂಬಲ್ಲಿ ಕುಮಾರಧಾರ ನದಿಗೆ ಅಡ್ಡಲಾಗಿರುವ ಕಿಂಡಿ ಅಣೆಕಟ್ಟಿಗೆ ಕಳೆದ ಎರಡು ತಿಂಗಳ ಹಿಂದೆ ಹಲಗೆ ಜೋಡಣೆಯಾಗಿ ಭರಪೂರ ನೀರು ಸಂಗ್ರಹವಾಗಿದ್ದರೂ, ಮರಳು ದಂಧೆಕೋರರ ಅಟ್ಟಹಾಸಕ್ಕೆ ನೀರು ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ.
ನೀರು ಏಕಾಏಕಿ ಕಡಿಮೆಯಾಗಿರುವುದರ ಕುರಿತು ಮಾಹಿತಿ ಕಲೆ ಹಾಕಲು ತೆರಳಿದಾಗ ಈ ಜಾಗದಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರು ತಮ್ಮ ಸ್ವಾರ್ಥಕ್ಕಾಗಿ ನೀರು ಸೋರಿಕೆಯಾಗುವಂತೆ ಮಾಡುತ್ತಿರುವುದು ತಿಳಿದು ಬಂದಿದೆ.
ನೀರು ವಿಪರೀತ ಸಂಗ್ರಹವಾಗಿರುವುದರಿಂದ ಮರಳು ತೆಗೆಯಲು ಕಷ್ಟಸಾಧ್ಯವಾಗುವ ಹಿನ್ನಲೆಯಲ್ಲಿ ಮರಳು ಮಾಫಿಯ ನಡೆಸುವವರು ಅಣೆಕಟ್ಟಿಗೆ ಅಳವಡಿಲಾಗಿರುವ ಹಲಗೆಯನ್ನು ರಾತ್ರಿ ವೇಳೆ ಸ್ವಲ್ಪ ಜಾರಿಸಿ ಅಡಿ ಭಾಗಕ್ಕೆ ಕಲ್ಲು ಇಡುತ್ತಾರೆ, ಇದರಿಂದ ನೀರು ಸೋರಿಕೆಯಾಗುತ್ತಿದೆ .
ಬುಧವಾರ ನದಿಯ ತಟದಲ್ಲಿ ಆಲಂಕಾರು ಮತ್ತು ಕುದ್ಮಾರು ಗ್ರಾಮದ ಜನರು ಜಮಾಯಿಸಿ ನದಿ ತಟದಲ್ಲಿ ಮರಳು ಮಾಫಿಯಾದವರು ನಡೆಸುವ ಈ ಕೃತ್ಯವನ್ನು ಕಟುವಾಗಿ ಟೀಕಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ವೇಳೆ ಮಾದ್ಯಮದ ಜೊತೆ ಮಾತನಾಡಿದ ಸ್ಥಳಿಯರು, ಅಣೆಕಟ್ಟಿನ ಮೇಲ್ಬಾಗದಲ್ಲಿ ನಡೆಯುತ್ತಿರುವ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡವರು ಅಣೆಕಟ್ಟಿನಿಂದ ನೀರು ಸೋರಿಕೆಯಾಗುವಂತೆ ಮಾಡಿಕೊಳ್ಳುತ್ತಿದ್ದಾರೆ. ನೀರು ಸಂಗ್ರಹವಾದಾಗ ನೀರಿನ ಕೊರತೆಯಾಗದ ರೈತರು ನೀರು ಖಾಲಿಯಾದ ಕಾರಣ ಕೃಷಿ ತೋಟಗಳಿಗೆ ನೀರು ಹಾಯಿಸಲು ನೀರಿಲ್ಲದಂತಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ವ್ಯವಸ್ಥೆಗಳನ್ನು ವಿರೂಪಗೊಳಿಸಿ ಜನ ಸಾಮಾನ್ಯರಿಗೆ ಅನ್ಯಾಯ ಮಾಡುವವರ ವಿರುದ್ದ ಸಂಬಂಧ ಪಟ್ಟವರು ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಸಣ್ಣ ನೀರಾವರಿ ಇಲಾಖೆಯ ಅಭಿಯಂತಯರ ಡಿ ಎಂ ಶಿವಪ್ರಸನ್ನ ಮಾಧ್ಯಮದ ಜೊತೆ ಮಾತನಾಡಿ, ಕಿಂಡಿ ಅಣೆಕಟ್ಟಿನಿಂದ ಸೋರಿಕೆಯಾಗಲು ಕಾರಣವೇನೆಂದು ಪರಿಶೀಲನೆ ನಡೆಸಲಾಗುವುದು. ಹಲಗೆಯನ್ನು ಜಾರಿಸಿ ಕಲ್ಲು ಇಡಲಾಗಿದೆ, ರಬ್ಬರ್ ತೆಗೆದು ನೀರು ಸೋರಿಕೆಯಾಗುವಂತೆ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸುವ ಸ್ಥಳಿಯರು ಸ್ಥಳಿಯ ಠಾಣೆಗೆ ದೂರು ನೀಡಲಿ. ಇಲಾಖಾ ವತಿಯಿಂದಲೂ ದೂರು ನೀಡಲಾಗುವುದು ಎಂದಿದ್ದಾರೆ.