ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಲ್ಲೊಂದಾದ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಐಎಸ್‌ಒ 9001:2015 ಮಾನ್ಯತೆ ದೊರಕಿದೆ.
ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆ ಸಂತ ಫಿಲೋಮಿನಾ ಕಾಲೇಜಿಗೆ 9001:2015 ಮಾನ್ಯತೆ ದೊರಕಿದ್ದು ಸಂತಸದ ವಿಚಾರವಾಗಿದೆ. ಅಂತರಾಷ್ರೀಯ ಮನ್ನಣೆಯು ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ನೀಡುತ್ತಿರುವ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ಉತ್ಕೃಷ್ಟತೆಗಾಗಿ ನಮ್ಮ ನಿರಂತರ ಅನ್ವೇಷಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯಿಂದ ನಡೆಯುವ ಕಾರ್ಯವಲ್ಲ. ಇದರ ಹಿಂದೆ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆಯ ಗುಣಮಟ್ಟದ ಸೇವೆಗಾಗಿ ಅತ್ಯಂತ ಮುತುವರ್ಜಿಯಿಂದ ಮಾರ್ಗದರ್ಶನ ನೀಡುತ್ತಿರುವ ಸಂಚಾಲಕರು ಮತ್ತು ಆಡಳಿತ ಮಂಡಳಿ, ನಿರಂತರ ಸಮರ್ಪಣಾ ಮನೋಭಾವದಿಂದ ಶ್ರಮಿಸುತ್ತಿರುವ ಸಿಬ್ಬಂದಿ ವರ್ಗ, ಈ ನಿಟ್ಟಿನಲ್ಲಿ ನಮಗೆ ಸಂಪೂರ್ಣ ಬೆಂಬಲ ನೀಡುತ್ತಿರುವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘ, ನಮ್ಮ ಪ್ರಯೋಗಶೀಲತೆಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡುತ್ತಿರುವ ವಿದ್ಯಾರ್ಥಿವೃಂದ ಇವರೆಲ್ಲರ ಪಾಲು ಗಮನಾರ್ಹವಾದುದು ಎಂದು ಕಾಲೇಜಿನ ಪ್ರಾಂಶುಪಾಲ ವಂ| ಡಾ. ಆಂಟೊನಿ ಪ್ರಕಾಶ್ ಮೊಂತೆರೋ ತಿಳಿಸಿದ್ದಾರೆ.
ಕಾಲೇಜಿಗೆ ಐಎಸ್‌ಒ 9001:2015 ಮಾನ್ಯತೆ ದೊರಕಿದ ಬಗ್ಗೆ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪರಮಪೂಜ್ಯ ಪೀಟರ್ ಪಾವ್ಲ್ ಸಲ್ಡಾನ, ಕಾರ್ಯದರ್ಶಿ ಅತಿ ವಂ| ಆಂಟೊನಿ ಮೈಕೆಲ್ ಶೆರಾ, ನಿಯೋಜಿತ ಕಾರ್ಯದರ್ಶಿ ಅತಿ ವಂ| ಪ್ರವೀಣ್ ಲಿಯೋ ಲಸ್ರಾದೊ, ಕಾಲೇಜಿನ ಸಂಚಾಲಕ ಅತಿ ವಂ| ಲಾರೆನ್ಸ್ ಮಸ್ಕರೇನಸ್ ಹಾಗೂ ಕ್ಯಾಂಪಸ್ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋರವರು ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋರವರಿಗೆ ಹಾಗೂ ಮಾನ್ಯತೆ ದೊರಕುವಲ್ಲಿ ಶ್ರಮವಹಿಸಿದ ಪ್ರತಿಯೋರ್ವರಿಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಹಾಗೂ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕರಾದ ಅಭಿಷೇಕ್ ಸುವರ್ಣ ಮತ್ತು ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.