ಪುತ್ತೂರು: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಹೊರಡಿಸಲಾದ ಆದೇಶಕ್ಕೆ ಸರಕಾರ ತಾತ್ಕಾಲಿಕ ತಡೆ ನೀಡಿ ಮತ್ತೊಂದು ಆದೇಶ ಹೊರಡಿಸಿದೆ.
ಎ ಗ್ರೇಡೆ ದೇವಸ್ಥಾನವಾಗಿರುವ ಪಂಜ ದೇವಸ್ಥಾನಕ್ಕೆ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ಇತರರನ್ನು ಸದಸ್ಯರಾಗಿ ನೇಮಿಸಿ ಎರಡು ದಿನಗಳ ಹಿಂದೆ ಧಾರ್ಮಿಕದತ್ತಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದರು. ಆದೇಶ ಬಂದ ಬೆನ್ನಲ್ಲೇ ವ್ಯವಸ್ತಾಪನಾ ಸಮಿತಿ ಸದಸ್ಯರು ಸಭೆ ಸೇರಿ ದೇವಿಪ್ರಸಾದ್ ಕಾನತ್ತೂರು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಪದಗ್ರಹಣವೂ ನಡೆದಿತ್ತು.
ಇದೀಗ ಆಯುಕ್ತರೇ ಮತ್ತೊಂದು ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪಣಂಬೂರು ನಂದನೇಶ್ವರ ದೇವಸ್ಥಾನ ಹಾಗೂ ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಸಮಿತಿ ರಚಿಸಿ ಹೊರಡಿಸಲಾದ ಆದೇಶವನ್ನು ಧಾರ್ಮಿದತ್ತಿ ಇಲಾಖಾ ಸಚಿವರ ಸೂಚನೆಯಂತೆ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.