ಪುತ್ತೂರು: ಮಹಾನ್ ಭಾರತದ ಕನಸಿನ ಸಾಕಾರಮೂರ್ತಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸುವಲ್ಲಿ ಪ್ರತಿ ಮನಸ್ಸುಗಳು ಒಂದಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪುತ್ತೂರು ನಮೋ ಭಾರತ್ ವತಿಯಿಂದ ಗುರುವಾರ ಸಂಜೆ ನಗರದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಹಿಂದಿನ ಗದ್ದೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ರಾಷ್ಟ್ರದ ಅಭಿವೃದ್ಧಿಗಾಗಿ 10 ವರ್ಷಗಳಲ್ಲಿ ಒಂದು ದಿನವೂ ರಜೆಯನ್ನು ಮಾಡದೆ ಶ್ರಮಿಸುವ ಪ್ರಧಾನಿ ನರೇಂದ್ರ ಮೋದಿಯವರು, ಸೈನಿಕರ ಜತೆ ದೀಪಾವಳಿ ಆಚರಿಸುವ, ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸುವ, ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ ಮೋದಿ ಕಂಗೊಳಿಸಿದ್ದಾರೆ ಎಂದು ಹೇಳಿದರು.
ಮೋದಿಯವರು ದೇಶದ ಆರ್ಥಿಕ ಸುಸ್ತೀಕರಣಕ್ಕಾಗಿ ಡಿಮೋನಿಟೈಜೇಶನ್ ತಂದು ಕೆಲವೇ ಸಮಯಗಳಲ್ಲಿ ಭಾರತ ಜಗತ್ತಿನ 5 ನೇ ದೊಡ್ಡ ಆರ್ಥಿಕ ಶಕ್ತಿಯ ರಾಷ್ಟ್ರವನ್ನಾಗಿ ಬೆಳೆಸಿದವರು. ಆರ್ಟಿಕಲ್ 370 ತೆಗೆದು ತಾಕತ್ತು ತೋರಿದವರು ಪ್ರಧಾನಿ. ಇಂತಹ ಪ್ರಧಾನಿಗೆ ರಾಹುಲ್ ಗಾಂಧಿಯೇ ಮೋದಿಯ ದೊಡ್ಡ ಪ್ರಚಾರಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸೂಲಿಬೆಲೆ ವ್ಯಂಗ್ಯವಾಡಿದರು.
ಕಳೆದ 500 ವರ್ಷಗಳಲ್ಲಿ ಮೋದಿಯಂತಹ ರಾಜ, ನಾಯಕ ಬಂದಿಲ್ಲ. ಅಯೋಧ್ಯೆ ಸೇರಿದಂತೆ ಕಾಶಿ, ಉಜ್ಜಯಿನಿ, ಕೇದಾರನಾಥಂತಹ ಕ್ಷೇತ್ರಗಳೂ ಮೋದಿಯ ಬರುವಿಕೆಗಾಗಿ ಕಾದಿವೆ. ಅಬುದಾಬಿಯಲ್ಲೂ ವಿಶೇಷ ಹಿಂದೂ ಮಂದಿರ ನಿರ್ಮಾಣವಾಗಿದೆ. ತಮಗೆ ತಾವೇ ಭಾರತರತ್ನ ಕೊಡಿಸಿಕೊಂಡ ಕಾಂಗ್ರೆಸ್ ಪ್ರಧಾನಿಗಳ ನಡುವೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ನೆನಪುಗಳನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಮೋದಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಳೆದ 20 ವರ್ಷಗಳ ಆಡಳಿತದಲ್ಲಿ ಮೋದಿಯವರ ವಿರುದ್ಧ ಒಂದೂ ಭ್ರಷ್ಟಾಚಾರ ಆರೋಪವಿಲ್ಲ. ಪ್ರಧಾನಿ ಮೋದಿಯವರು ದೇಶದ ಪ್ರತಿ ಪ್ರಜೆಗೂ ಆದರ್ಶ ರಾಜಕಾರಣಿ ಎಂದು ಸೂಲಿಬೆಲೆ ಹೇಳಿದರು.
ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಮೋ ಭಾರತ್ ಕಾರ್ಯಕರ್ತ ರಾಜೇಶ್ ಬನ್ನೂರು ತಾಲೂಕು ಸಂಚಾಲಕ ಶಶಿಧರ ನಾಯಕ್, ಕಾರ್ಯಕರ್ತರಾದ ಅವಿನಾಶ್ ನಾಯ್ಕ್, ಶೇಖರ್ ಬನ್ನೂರು, ನಿವೇದಿತಾ ಬಾಳಿಗ ಮೊದಲಾದವರು ಕಾರ್ಯಕ್ರಮ ಸಂಘಟಿಸಿದ್ದರು.