ಪುತ್ತೂರು: ಮುಂದಿನ ಅಧಿವೇಶನದಲ್ಲಿ ನನ್ನ ಮೊದಲ ಪ್ರಶ್ನೆ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸಂಭಾವನೆ ಹೆಚ್ಚಳದ ಕುರಿತು. ಹೀಗೆಂದು ಹೇಳಿದರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ.
ಅವರು ಶನಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಹಕಾರ ಸಂಘದ ಪುತ್ತೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಈ ಹಿಂದೆ ಅಧಿವೇಶದನದಲ್ಲಿ ನಿಮ್ಮ ಸಂಭಾವನೆ ಕುರಿತು ಪ್ರಶ್ನಿಸಿದ್ದೆ ಎಂದ ಅವರು, ಇತ್ತೀಚೆಗೆ ನಡೆದ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಹಿಳೆಯರನ್ನು ಸೇರಿಸಿದ ಕ್ರೆಡಿಟ್ ನಿಮಗೆ ಸೇರುತ್ತದೆ. ಇದು ತಾಯಿ ರೂಪದ ಸೇವೆ. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಒಗ್ಗಟ್ಟು ಇದೆ ಎಂಬುದನ್ನು ಇದು ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಾನೂನಿನಲ್ಲಿ ಅವಕಾಶ ಇದ್ದಲ್ಲಿ 5 ಲಕ್ಷ ಕೊಡುತ್ತೇನೆ, ವೈಯಕ್ತಿಕ 50 ಸಾವಿರ ಕೊಡ್ತೇನೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಓರ್ವ ಅಧ್ಯಾಪಕನ ಕೆಲಸಕ್ಕಿಂತಲೂ ಕಷ್ಟದ ಕೆಲಸ. ಜತೆಗೆ ಪುಟಾಣಿ ಮಕ್ಕಳಿಗೆ ಎರಡನೇ ತಾಯಿ ಇದ್ದಂತೆ ಎಂದು ಹೇಳಿದ ಅವರು, ಈಗಾಗಲೇ ಸಹಕಾರ ಸಂಘವನ್ನು ರಚಿಸಿದ್ದೀರಿ. ಇದರ ಜತೆಯಾಗಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ವಿಮೆ ಮಾಡುವ ಮೂಲಕ ಆರೋಗ್ಯದಲ್ಲಿ ತೊಂದರೆ ಉಂಟಾದವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಹಕಾರಿಯಾಗುತ್ತದೆ ಎಂಬ ಸಲಹೆಯನ್ನು ನೀಡಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಕೋಶಾಧಿಕಾರಿ ವಿಶಾಲಾಕ್ಷಿ ಮಾತನಾಡಿ, ನಮಗೆ ಕನಿಷ್ಠ ವೇತನ ನೀಡಿ, ನಮ್ಮನ್ನು ಬದುಕಲು ಬಿಡಿ ಎಂಬ ಹಲವಾರು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಿ. ನಾವು ಕೆಲಸ ಮಾಡ್ತೇವೆ ಎಂದು ಹೇಳಿದರು.
ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಂಘದ ವತಿಯಿಂದ ನೀಡಲಾಗುವುದು ನೆರವನ್ನು ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಹಕಾರ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಬಿ.ಆರ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ.ಎ., ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಕಮಲ, ಮೇಲ್ವಿಚಾರಕಿ ವಾಣಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಸಹಾಯ ಪೂರ್ಣಿಮಾ ಮತ್ತು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಜೆ.ಎ. ಭಾರತಿ ಅವರನ್ನು ಸನ್ಮಾನಿಸಲಾಯಿತು. ಸಂಘದ ನಿರ್ದೇಶಕಿ ಕವಿತಾ ಸ್ವಾಗತಿಸಿದರು. ನಿರ್ದೇಶಕಿ ಶ್ಯಾಮಲಾ ವಂದಿಸಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಅಂಗನವಾಡಿ ಕಾರ್ಯಕರ್ತೆ ಅರುಣಾ ಕಾರ್ಯಕ್ರಮ ನಿರೂಪಿಸಿದರು.