ವಿಟ್ಲ : ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ನಲ್ಲಿ ನಡೆದ ನಗದು ಹಾಗೂ ಕೋಟ್ಯಾಂತರ ರೂ. ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದ್ದು, ಈ ಕುರಿತು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಕಳ್ಳತನದ ಮಾಹಿತಿ ನೀಡಿ, ಬಂಟ್ವಾಳ ಗೂಡಿನ ಬಳಿ ನಿವಾಸಿ ಮಹಮ್ಮದ್ ರಫೀಕ್ ಯಾನೆ ಗೂಡಿನ ಬಳಿ ರಫೀಕ್ (35), ಮಂಜೇಶ್ವರ ಬಿಂಗಿನಾನಿ ನಿವಾಸಿ ಇಬ್ರಾಹಿಂ ಕಲಂದರ್ (41), ಮಂಜೇಶ್ವರ ಗಾಳಿಯಡ್ಕ ನಿವಾಸಿ ದಯಾನಂದ ಎಸ್ (37) ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಮಾ.7 ರಾತ್ರಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಕರ್ಣಾಟಕ ಬ್ಯಾಂಕ್ ನ ದಕ್ಷಿಣ ದಿಕ್ಕಿನ ಗೋಡೆಯಲ್ಲಿರುವ ಕಿಟಕಿಯ ಸರಳುಗಳನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಒಳಪ್ರವೇಶಿಸಿ ಗ್ಯಾಸ್ ಕಟರ್ನಿಂದ ಸ್ಟ್ರಾಂಗ್ ರೂಮಿನ ಬಾಗಿಲನ್ನು ತುಂಡರಿಸಿ ಒಳ ಪ್ರವೇಶಿಸಿ 17,28,735 ರೂ ನಗದು ಹಾಗೂ 696.21 ಗ್ರಾಂ ಚಿನ್ನಾಭರಣ ಮತ್ತು 1,00,000/- ಮೌಲ್ಯದ ಬೆಳ್ಳಿ ಕಳ್ಳತನ ಮಾಡಿರುವ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಪತ್ತೆ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದು, ಮಾ.10 ರಂದು ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 2,40,700/- ರೂ ನಗದು, ಕಳ್ಳತನದ ಹಣದಿಂದ ಖರೀದಿಸಿದ ಎರಡು ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಸಾಮಾಗ್ರಿಗಳು, 4,40,700/-, 12,48,218/- ಮೌಲ್ಯದ ಚಿನ್ನಾಭರಣ, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕಾರು , ಗ್ಯಾಸ್ ಕಟರ್ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 25.70 ಲಕ್ಷ ರೂ. ಎಂದು ತಿಳಿಸಿದರು.
ಆರೋಪಿಗಳಾದ ಮಹಮ್ಮದ್ ರಫೀಕ್ ಯಾನೆ ಗೂಡಿನ ಬಳಿ ರಫೀಕ್ ಎಂಬಾತನ ವಿರುದ್ದ ರಾಜ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಹಲವು ಕಳವು ಪ್ರಕರಣಗಳಲ್ಲಿ ಕೇಸು ದಾಖಲಾಗಿದೆ. ಇಬ್ರಾಹಿಂ ಕಲಂದರ್ ಎಂಬಾತನ ವಿರುದ್ಧ ಪುತ್ತೂರು, ಉಪ್ಪಿನಂಗಡಿ, ಕೇರಳ, ಮೂಡಬಿದ್ರೆ ಹೀಗೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ ಹಾಗೂ ದಯಾನಂದ ಎಸ್. ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತವೆ. ಪ್ರಕರಣಕ್ಕೆ ಸಂಬಂಧಿಸಿ 2 ಜನ ಆರೋಪಿಗಳ ಪತ್ತೆಗೆ ಬಾಕಿ ಇರುತ್ತದೆ ಎಂದು ತಿಳಿಸಿದರು.
ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ. ಬಿ. ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎನ್.ಎಂ. ಹಾಗೂ ರಾಜೇಂದ್ರ ಡಿ. ಎಸ್. ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯ ಪ್ರಸಾದ್ ಅವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ ಹೆಚ್ ರವರ ನೇತ್ರತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್, ಉದಯರವಿ, ಹರೀಶ್ ಕುಮಾರ್, ವಿದ್ಯಾ ಕೆ.ಜೆ. ಸಿಬ್ಬಂಧಿಗಳಾದ ವೆಂಕಟರಮಣ ಗೌಡ, ಪ್ರವೀಣ್ ಮೂರುಗೋಳಿ, ಉದಯ ರೈ, ರಕ್ಷಿತ್ ರೈ, ಪ್ರವೀಣ್ ರೈ ಪಾಲ್ತಾಡಿ, ಅದ್ರಾಮ, ಕರುಣಾಕರ, ರಾಹುಲ್ ರಾವ್, ಶ್ರೀಧರ ಸಿ ಎಸ್, ಜಗದೀಶ್ ಅತ್ತಾಜೆ, ಹೇಮರಾಜ್, ಅಶೋಕ್, ವಿವೇಕ್ ಕೆ., ಕುಮಾರ್ ಹೆಚ್.ಕೆ., ಸಂಪತ್, ದಿವಾಕರ್, ಸಂತೋಷ್ ಕುಮಾರ್ ಮಾಯಪ್ಪರವರು ಭಾಗವಹಿಸಿರುತ್ತಾರೆ. ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಪೊಲೀಸ್ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.