ಪುತ್ತೂರು: ಕೇಂದ್ರ ಸರಕಾರ ಅಸಾಂವಿಧಾನಿಕ ಸಿಎಎ ಜಾರಿ ಮಾಡಿರುವುದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಅಂಗವಾಗಿ ಪುತ್ತೂರು ಎಸ್‌ಡಿಪಿಐ ವತಿಯಿಂದ ಪುತ್ತೂರಿನ ದರ್ಬೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಸಿಎಎ ಕಾಯ್ದೆಯು ಈ ದೇಶದ ಜಾತ್ಯಾತೀತ ಪರಂಪರೆಗೆ ಮಾರಕ ಮತ್ತು ಇದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಮಾತನಾಡಿ, ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ ಸಂವಿಧಾನದ ಆಶಯಗಳನ್ನು ಉಪಯೋಗಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷವು ಇಂದು ಅದೇ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ದೇಶವನ್ನು ಒಡೆಯುವ ಕಾರ್ಯ ಮಾಡುತ್ತಿದೆ. ಆದುದರಿಂದ ಈ ದೇಶದಿಂದಲೇ ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಸಮಾರೋಪ ಭಾಷಣ ಮಾಡಿ, ಜನವಿರೋಧಿ ಕಾನೂನನ್ನು ಹಿಂಪಡೆಯದಿದ್ದರೆ ಎಸ್‍ಡಿಪಿಐ ಪಕ್ಷ ಯಾವುದೇ ರಾಜಿ ಇಲ್ಲದೆ ದೇಶಾದ್ಯಂತ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಏ.ಕೆ, ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೊಡಿಪ್ಪಾಡಿ, ಕೋಶಾಧಿಕಾರಿ ವಿಶ್ವನಾಥ ಪುಂಚತ್ತಾರು, ಕ್ಷೇತ್ರ ಸಮಿತಿ ಸದಸ್ಯರಾದ ಡಿ.ಬಿ. ಮುಸ್ತಫಾ ವಿಟ್ಲ, ಅಶ್ರಫ್ ಬಾವು ಪಡೀಲ್, ಹಲವಾರು ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದ್ದರು.
ಪುತ್ತೂರು ಕ್ಷೇತ್ರ ಪಕ್ಷ ಸಂಘಟನಾ ಕಾರ್ಯದರ್ಶಿ ರಿಯಾಝ್ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.