ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ದೇವಿಗೆ ಸೂರ್ಯರಶ್ಮಿಯ ಸ್ಪರ್ಶ, ದೇವಿಗೆ ವಿಶೇಷ ಪೂಜೆ

ಪುತ್ತೂರು: ಪುತ್ತೂರು ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಗುರುವಾರ ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯನ ಕಿರಣಗಳು ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಗರ್ಭಗುಡಿಯಲ್ಲಿ ನೆಲೆಯಾಗಿರುವ ದೇವಿಯ ಬಿಂಬಕ್ಕೆ ಸ್ಪರ್ಶವಾಯಿತು.

ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿರುವ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು. ಪ್ರಾತಃಕಾಲ ಶ್ರೀಚಾಮುಂಡೇಶ್ವರಿ ಭಜನಾ ಮಂಡಳಿಯವರಿಂದ ಭಜನೆ, ಶ್ರೀಕೃಷ್ಣ ಉಪಾಧ್ಯಾಯರವರಿಂದ ವೇದ ಮಂತ್ರ ಘೋಷ ನೆರವೇರಿತು. ಬೆಳಿಗ್ಗೆ 7.30ರ ಸಮಯದಲ್ಲಿ ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀಯ ಬಿಂಬದ ಮೇಲೆ ಸ್ಪರ್ಶಿಸಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಎನ್.ಐತ್ತಪ್ಪ ಸಪಲ್ಯರ ನೇತೃತ್ವದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ನೆರವೇರಿತು. ವೈದಿಕರಿಂದ ವೇದ, ಘೋಷ ಮಂತ್ರ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.

ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಮೀನ ಸಂಕ್ರಮಣದಂದು ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನವಾಗಿದೆ. ಮೀನ ಸಂಕ್ರಮಣ ದಿನ ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ಬಿಂಬಕ್ಕೆ ಸೂರ್ಯನ ಕಿರಣಗಳು ಮುಂಜಾನೆಯಲ್ಲಿ ಸ್ಪರ್ಶಿಸುವ ರಾಜ್ಯದ ಎಕೈಕ ದೇವಸ್ಥಾನ ಇದಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆಯ ವೇಳೆಗೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುತ್ತಿದೆ.































 
 

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಶ್ರೀಕೃಷ್ಣ ಉಪಾಧ್ಯಾಯ, ನಗರ ಸಭಾ ಮಾಜಿ ಸದಸ್ಯೆ ವನಿತಾ, ಪುರಸಭಾ ಮಾಜಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಕ್ಷೇತ್ರದ ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಲಕ್ಷ್ಮೀಪ್ರಸಾದ್ ಬೆಟ್ಟ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top