ವಿಶ್ವಗುರುವಾಗುವತ್ತ ಭಾರತದ ಚಿತ್ತ – ಪ್ರೊ ವಿಷ್ಣುಕಾಂತ್ ಚಟ್ಟಪಲ್ಲಿ| ವಿವೇಕಾನಂದದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

ಪುತ್ತೂರು: ವಿಕಸಿತ ಭಾರತದ ಮುನ್ನೋಟಗಳು ಜಗತ್ತಿಗೆ ಕಾಣಲಾರಂಭಿಸಿವೆ. ವಿಜ್ಞಾನ, ಸಂಶೋಧನೆ, ಕ್ರೀಡೆ, ಆರ್ಥಿಕತೆ, ಕೃಷಿ, ವ್ಯವಹಾರ ನಿರ್ವಹಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಮರ್ಥವಾಗಿ ಭಾರತವು ವಿಶ್ವಗುರುವಾಗುವುದರತ್ತ ಮುನ್ನಡೆಯುತ್ತಿದೆ ಎಂಬುದು ಹೆಮ್ಮೆಯ ವಿಷಯ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ವಿಶೇಷವಾಗಿ ಮುಂಚೂಣಿಯಲ್ಲಿ ನಿಂತು ದುಡಿಯುತ್ತಿದ್ದಾರೆ. ಆದ್ದರಿಂದ ಇದನ್ನು ನಾರೀಶಕ್ತಿ ಯುಗ ಎಂದು ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಷ್ಣುಕಾಂತ್ ಚಟ್ಟಪಲ್ಲಿ ಹೇಳಿದರು.

ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸ್ವಾಯತ್ತ ಪುತ್ತೂರು ಇದರ ಆಶ್ರಯದಲ್ಲಿ ನಡೆದ 2047 ಭಾರತ ಶತಮಾನದ ದೃಷ್ಟಿ ಎಂಬ ವಿಷಯದ ಮೇಲೆ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು ಒಂದು ಶತಮಾನ ಕಳೆಯುತ್ತದೆ. ಈ ಅವಧಿಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಆದ ಬದಲಾವಣೆಗೆ ನಾವು ಸಾಕ್ಷಿಯಾಗಿದ್ದೇವೆ. ಭಾರತದ ಆರ್ಥಿಕತೆ ಪರಿವರ್ತನೆ ಮತ್ತು ಪುನರುತ್ಥಾನದ ಹಾದಿಯಲ್ಲಿದೆ. ಇದರೊಂದಿಗೆ ಯೋಗ, ಕ್ರೀಡೆ, ವಿಜ್ಞಾನ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ತೀವ್ರಸ್ವರೂಪದ ಬದಲಾವಣೆಯಾಗಿದೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ, ಚಂದ್ರಯಾನ-3, ಸ್ವದೇಶಿ ಕೊರೋನಾ ಲಸಿಕೆಗಳು ಭಾರತದ ಸಾಧನೆಗೆ ಸಾಕ್ಷಿಯಾಗಿ ನಿಂತಿವೆ. ಇದರ ಜೊತೆಯಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಯುಪಿಐ ಬಳಕೆಯನ್ನು ಜಗತ್ತಿನ ಹಲವು ರಾಷ್ಟ್ರಗಳು ಒಪ್ಪಿಕೊಂಡಿವೆ. ಭಾರತದ ಆಧ್ಯಾತ್ಮಿಕ ನಿಲುವು ವಿಶ್ವ ಗುರುವಾಗುವತ್ತ ಮುನ್ನಡೆಯುತ್ತಿದೆ. ಆದ್ದರಿಂದ ಭಾರತವು 2047ಕ್ಕಿಂತ ಮೊದಲೇ ವಿಶ್ವ ಗುರುವಿನ ಸ್ಥಾನದಲ್ಲಿ ನಿಲ್ಲುತ್ತದೆ ಎಂದು  ಪ್ರೊ. ವಿಷ್ಣುಕಾಂತ್ ಚಟ್ಟಪಲ್ಲಿ ಹೇಳಿದರು.































 
 

ಮುಖ್ಯ ಅತಿಥಿಯಾಗಿ ಒಡಿಶಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ವಿ. ಕೃಷ್ಣಭಟ್ ಮಾತನಾಡಿ, ಪ್ರಾಚೀನ ಭಾರತದಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಶಿಕ್ಷಣವನ್ನು ಪಡೆಯಲು ಭಾರತಕ್ಕೆ ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ ಮೆಕಾಲೆ ಶಿಕ್ಷಣವು ವಿದ್ಯೆಗಾಗಿ ನಾವು ಪಶ್ಚಿಮದ ಕಡೆಗೆ ನೋಡುವಂತೆ ಮಾಡಿತು. ಭಾರತ ಯುರೋಪಿನ ಅನುಕರಣೆ ಮಾಡುವ ಅಗತ್ಯವಿಲ್ಲ. ಮಾನವ ಕಲ್ಯಾಣಕ್ಕೆ ಅಗತ್ಯವಿರುವ ಚಿಂತನೆಗಳನ್ನು ಪಸರಿಸುವಲ್ಲಿ ಪಶ್ಚಿಮದ ರಾಷ್ಟ್ರಗಳು ಸೋತಿವೆ. ಭಾರತದಲ್ಲಿ ನವಯುಗ ಆರಂಭವಾಗಿದ್ದು ಜಗತ್ತಿನ ರಾಷ್ಟ್ರಗಳು ಮಾರ್ಗದರ್ಶನಕ್ಕಾಗಿ ಭಾರತದ ಕಡೆಗೆ ನೋಡುತ್ತಿವೆ ಎಂದು ಅಭಿಪ್ರಾಯಪಟ್ಟರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಪರಿವರ್ತನೆಯಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮುಖ್ಯವಾಗಿದೆ. ಮೆಕಾಲೆ ಶಿಕ್ಷಣದಲ್ಲಿ ರಾಷ್ಟ್ರೀಯ ಪರಿಕಲ್ಪನೆಯ ಅಂಶಗಳು ಬಂದಿಲ್ಲ. ಜಗತ್ತಿನ ಇತರ ರಾಷ್ಟ್ರಗಳಲ್ಲಿ ಕಾಣಲಾಗದ ಭಾವನಾತ್ಮಕ ಅಂಶಗಳು ಭಾರತದಲ್ಲಿ ನೋಡಲು ಸಿಗುತ್ತವೆ. ಜಿ.20 ಸಮಾವೇಶದ ಮೂಲಕ ಜಗತ್ತಿಗೆ ಭಾರತವು ಶಾಂತಿಯ ಸಂದೇಶವನ್ನು ನೀಡಿದೆ. ರಾಷ್ಟ್ರ ಮೊದಲು ಎಂಬ ನಿಲುವು ನಮ್ಮೆಲ್ಲರದೂ ಆಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್., ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಉಪಸ್ಥಿತರಿದ್ದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ವಿಚಾರ ಸಂಕಿರಣದ ಸಂಯೋಜಕಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯಸರಸ್ವತಿ ಬಿ. ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮೀ ವಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಗೋಷ್ಠಿಗಳಲ್ಲಿ ಮಂಡನೆಯಾಗುವ ಪ್ರಬಂಧಗಳ ಸಾರಲೇಖವನ್ನು ಒಳಗೊಂಡ ಪುಸ್ತಕವನ್ನು ಪ್ರೊ. ಪಿ.ವಿ.ಕೃಷ್ಣಭಟ್ ಬಿಡುಗಡೆಗೊಳಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿಚಾರಗೋಷ್ಠಿ ಮುಂದುವರಿಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top