ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆಯಾಗಿದ್ದಾರೆ.
ಕಿರಣ್ ಬುಡ್ಲೆಗುತ್ತು ಅವರು ದ.ಕ. ಜಿಲ್ಲಾ ಕಾಂಗ್ರೆಸ್‍ನಿಂದ ಸಂಸದ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ಒಕ್ಕಲಿಗ ಸಮುದಾಯದ ಯುವ ನಾಯಕರೂ ಆಗಿದ್ದಾರೆ. ಡಿಕೆಶಿ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿಯಲ್ಲಿದ್ದುಕೊಂಡು ಹಲವಾರು ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಒಕ್ಕಲಿಗ ಸಮುದಾಯದ ಜತೆಗೆ ಜಿಲ್ಲೆಯ ಗಮನ ಸೆಳೆದಿದ್ದರು.
ದಕ್ಷಿಣ ಕನ್ನಡದ ಬಹು ಸಂಖ್ಯಾತ ಸಮುದಾಯಕ್ಕೆ ಸೇರಿದ ಕಿರಣ್ ಬುಡ್ಲೆಗುತ್ತು ಅವರು ಕಳೆದ 23 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಜೊತೆ ವಿವಿಧ ಜವಾಬ್ದಾರಿಗಳನ್ನು, ಹಲವಾರು ನಾಯಕತ್ವಗಳನ್ನು ವಹಿಸಿಕೊಂಡು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ಹಲವು ಸಮಾಜಗಳ ಮತ್ತು ಸಂಘಟನೆಗಳ ಜತೆ ನಿಕಟ ಸಂಪರ್ಕ ಇಟ್ಟುಕೊಂಡಿರುವ ಕಿರಣ್ ಗೌಡ ಬುಡ್ಲೆಗುತ್ತು ಹುಟ್ಟು ಸಂಘಟಕರಾಗಿದ್ದಾರೆ.