ಬೆಳ್ಳಾರೆ : ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂ. ವೆಚ್ಚದಲ್ಲಿ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ನಿರ್ಮಿಸಲಾದ ಆಟೋರಿಕ್ಷಾ ತಂಗುದಾಣದ ಉದ್ಘಾಟನೆ ಶನಿವಾರ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ತಂಗುದಾಣ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಗೆ ಪೂರಕವಾಗಿ ದ.ಕ.ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಕಳೆದ ಹದಿನೈದು ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದ ಅವರು, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಹೀಗೆ ಜಿಲ್ಲೆಯ ಭವಿಷ್ಯದ ಹಿತ ದೃಷ್ಟಿಗೆ ಪೂರಕವಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಿಸಲಾಗಿದೆ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಬೆಳ್ಳಾರೆಯ ಆಟೋ ರಿಕ್ಷಾ ಚಾಲಕರ ತಂಡ ಉತ್ತಮ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ತನ್ನ ಇರುವಿಕೆಯನ್ನು ತೋರ್ಪಡಿಸಿದೆ. ಇನ್ನೂ ಕೆಲ ದಿನಗಳಲ್ಲಿ ಬೆಳ್ಳಾರೆ ತಡಗಜೆ ಸಂಪರ್ಕ ರಸ್ತೆ 20 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ ಎಂದರು.
ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ ನಮಿತಾ ಎಲ್ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬೆಳ್ಳಾರೆ ಗ್ರಾ.ಪಂ.ಉಪಾಧ್ಯಕ್ಷೆ ವೀಣಾ ಮೂಡಾಯಿತೋಟ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ ವಳಲಂಬೆ, ಗ್ರಾ.ಪಂ.ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ವಿಠಲದಾಸ್ ಎನ್‌ಎಸ್‌ಡಿ, ದಿನೇಶ್ ಹೆಗ್ಡೆ, ಜಯಶ್ರೀ ಪಡ್ಡು, ಶ್ವೇತಾ ನೆಟ್ಟಾರು, ಗುತ್ತಿಗೆದಾರ ಮಾಧವ ಮಾವೆ, ಬೆಳ್ಳಾರೆ ಮೇಲಿನ ಪೇಟೆ ಅಟೋ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಹರೀಶ್ ಕಲ್ಲಪಣೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು,ಶಾಸಕಿ ಭಾಗೀರಥಿ, ಆಟೋ ನಿಲ್ದಾಣದ ಅನುದಾನಕ್ಕೆ ಶ್ರಮಿಸಿದ ಸಚಿನ್ ರೈ ಪೂವಾಜೆ, ಗುತ್ತಿಗೆದಾರ ಮಾಧವ ಮಾವೆ, ಸಾಮಾಜಿಕ ಸೇವೆಗಾಗಿ ಕೊರಗಪ್ಪ ಪಾಟಾಜೆ, ಸೀತಾರಾಮ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.
ಯಶಸ್ವಿ ಮತ್ತು ಅಶ್ವಿನಿ ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು.