ಅಡ್ಯನಡ್ಕ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ವಿಚಾರಣೆ ವೇಳೆ ಕೋಟ್ಯಾಂತರ ಮೌಲ್ಯದ ಚಿನ್ನ ಹೂತಿಟ್ಟಿರುವುದಾಗಿ ಬಾಯಿಬಿಟ್ಟಿದ್ದಾರೆ.
ಕಳವು ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ಪೊಲೀಸ್ ತಂಡ ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಕಳ್ಳರು ನೀಡಿದ ಮಾಹಿತಿ ಆಧರಿಸಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಾಸರಗೋಡಿನ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಯಾರ್ ಸಜಂಕಿಲ ಎಂಬಲ್ಲಿ ಹೂತಿಟ್ಟಿ ರೀತಿಯಲ್ಲಿ ಪತ್ತೆಯಾಗಿದೆ. ಸದ್ಯದಲ್ಲೇ ಈ ಕುರಿತು ಹೆಚ್ಚಿನ ಮಾಹಿತಿ ಹೊರಬೀಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ಕಳ್ಳತನ ಪ್ರಕರಣದಲ್ಲಿ ಕಾಸರಗೋಡು ಕಡೆಯ ಮೂವರು ಕಳ್ಳರ ಜತೆಗೆ ಬಾಯಾರು ಗ್ರಾಮದ ಪೈವಳಿಕೆ ಗಾಳಿಯಡ್ಕದ ವ್ಯಕ್ತಿಯೊಬ್ಬ ಭಾಗಿಯಾಗಿದ್ದ ಎಂದು ತಿಳಿದು ಬಂದಿದ್ದು, ಈ ನಡುವೆ ಆತ ತನ್ನೂರಿನಿಂದ ಅಡ್ಯನಡ್ಕಕ್ಕೆ ಆಗಮಿಸಿ ಮಧ್ಯ ಸೇವನೆ ಮಾಡಿ ನಶೆಯಲ್ಲಿ ಬ್ಯಾಂಕ್‌ಗೆ ನುಗ್ಗಿ ಹಣ ಕಳವು ಮಾಡಿರುವ ಬಗ್ಗೆ, ಯಾರು ಏನು ಮಾಡಿದರು ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಕೆಲವು ವರ್ಷಗಳಿಂದ ವೆಲ್ಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಈತ ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಪೊಲೀಸ್ ತನಿಖೆಯಲ್ಲೂ ಬಹಿರಂಗಗೊಂಡಿತ್ತು. ತನಿಖೆ ಮುಂದುವರೆದಿದೆ.