ಪುತ್ತೂರು: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಗುರುವಾರ ಕಿಲ್ಲೇ ಮೈದಾನದಲ್ಲಿ ನಡೆಯಿತು.
ಸಮಾವೇಶ ಉದ್ಘಾಟಿಸಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿ, ಫಲಾನುಭವಿಗಳಿಗೆ ಕಾರ್ಯಕ್ರಮದ ಅರಿವು ನೀಡುವ ನಿಟ್ಟಿನಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಸಿದ್ಧರಾಮಯ್ಯ ಅವರು ಎರಡನೇ ಮುಖ್ಯಮಂತ್ರಿ ಅವಧಿಯಲ್ಲಿ ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಗ್ಯಾರಂಟಿ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ನುಡಿದಂತೆ ನಡೆಯುವ ಸರಕಾರ ಕಾಂಗ್ರೆಸ್ ಎಂದು ತೋರಿಸಿಕೊಟ್ಟಿದ್ದಾರೆ ಎಂದ ಅವರು, ಪ್ರಸ್ತುತ ಸರಕಾರದಲ್ಲಿ ಯಾವುದೇ ಅನುದಾನಕ್ಕೆ ಕೊರತೆಯಾಗಿಲ್ಲ ಎಂದು ಹೇಳಿದರು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಐದು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಗ್ಯಾರಂಟಿ ಕುರಿತು ನಮ್ಮ ಮನಸ್ಸಿನಲ್ಲೇ ಆತಂಕ ಇತ್ತು. ಸಿದ್ಧರಾಮಯ್ಯ ಸರಕಾರ ಒಂದು ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಮನೆ ಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಇದು ಸಿದ್ದರಾಮಯ್ಯ ಸರಕಾರ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ಗ್ಯಾರಂಟಿಗಳನ್ನು ಮಹಿಳೆಯರಿಗೆ ನೀಡಿದರೆ ಆರ್ಥಿಕವಾಗಿ ಮನೆ ಅಭಿವೃದ್ಧಿಯಾಗಲು ಸಹಕಾರಿ ಆಗುತ್ತದೆ. ಕೇವಲ ಐಡೆಂಟಿ ಕಾರ್ಡ್ ಮೂಲಕ ಮಹಿಳೆಯರಿಗೆ ಶಕ್ತಿ ನೀಡಿದೆ. ಪ್ರಸ್ತುತ ಇಡೀ ದೇಶ ಗ್ಯಾರಂಟಿಗಳ ಹಿಂದೆ ಬಿದ್ದಿದೆ ಎಂದರು.
ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ., ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಹೆಚ್.ವಿ.ಇಬ್ರಾಹಿಂಪುರ, ತಹಶೀಲ್ದಾರ್ ಪುರಂದರ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ’ಸೋಜಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಂಗಳಾ ಕಾಳೆ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ಉಪಸ್ಥಿತರಿದ್ದರು. ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಶಕ್ತಿ ಯೋಜನೆ ಕುರಿತು, ಮೆಸ್ಕಾಂನ ರಾಮಚಂದ್ರ ಗೃಹಜ್ಯೋತಿ, ಸಿಡಿಪಿಒ ಇಲಾಖೆಯ ಜಲಜಾಕ್ಷಿ ಗೃಹಲಕ್ಷ್ಮೀ, ಜಿಲ್ಲಾ ಉದ್ಯೋಗ ಅಧಿಕಾರಿ ವೈ.ಎಂ.ಬಡಿಗೇರ ಯುವನಿಧಿ ಕುರಿತು ಮಾತನಾಡಿದರು.
ಫಲಾನುಭವಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಬಾಲಕೃಷ್ಣ ಪೋರ್ದಾಲ್ ಕಾರ್ಯಕ್ರಮ ನಿರೂಪಿಸಿದರು.