ಬೆಂಗಳೂರು: ಸರಕಾರ 2024-25ನೇ ಸಾಲಿನ ಪಠ್ಯಪುಸ್ತಕಗಳನ್ನು ಕೊನೆಗೂ ಪರಿಷ್ಕರಿಸಿದೆ.
ಡಾ ಮಂಜುನಾಥ್ ಹೆಗಡೆ ನೇತೃತ್ವದ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ ಕುರಿತು ಶಾಲಾ ಶಿಕ್ಷಣ ಇಲಾಖೆ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಪಠ್ಯಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. 2023-24 ಸಾಲಿನಲ್ಲೂ ಹಲವು ತಿದ್ದುಪಡಿ ಮಾಡಿತ್ತು. ಇದರಂತೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ಮಾರ್ಗಸೂಚಿಯಂತೆ ರಾಜ್ಯ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದೆ.
1 ರಿಂದ 10 ನೇ ತರಗತಿವರೆಗಿನ ಕನ್ನಡ ಪ್ರಥಮ ಮತ್ತು ದ್ವಿತೀಯ ಭಾಷೆ ಹಾಗೂ 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷೆಯ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಇದರ ಜೊತೆಗೆ 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ. ಹಿಂದಿನ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಕೈಬಿಟ್ಟಿದ್ದ ಕೆಲವು ಪಠ್ಯಗಳನ್ನು ಈ ಸಮಿತಿ ಪರಿಷ್ಕರಿಸಿ ಸೇರಿಸಿಕೊಂಡಿದೆ.
ಪ್ರಸ್ತುತ ಪರಿಷ್ಕರಣ ಸಮಿತಿಗೆ ಪೂರ್ವದಲ್ಲಿಯೇ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ್ದ 2023-24ನೇ ಸಾಲಿನ ಪಠ್ಯಪುಸ್ತಕಗಳ ತಿದ್ದೋಲೆಯ ಅಂಶಗಳನ್ನು ಸಮಿತಿ ಅಳವಡಿಸಿಕೊಂಡಿದೆ, 1-5ನೇ ತರಗತಿ ಕನ್ನಡ: ಕೆ.ವಿ.ತಿರುಮಲೇಶ್, ವಿ.ಜಿ.ಭಟ್ಟರ ಮಕ್ಕಳ ಕವನಗಳ ಸೇರ್ಪಡೆ, ಕಂಬಾರ-‘ಸೀಮೆ, ಕಾರ್ನಾಡ್- ‘ಅಧಿಕಾರ, ದೇವಿದಾಸ-‘ಚಕ್ರಗ್ರಹಣ, ಮರಿಯಪ್ಪ ಭಟ್ಟ- ‘ನಮ್ಮ ಭಾಷೆ, ಎ.ಎನ್.ಮೂರ್ತಿರಾವ್-‘ವ್ಯಾಘ್ರ ಗೀತೆ’, ದೇವನೂರು ಮಹಾದೇವ- ‘ಎದೆಗೆ ಬಿದ್ದ ಅಕ್ಷರ, ಅಕ್ಕಮಹಾದೇವಿ- ‘ವಚನಗಳು’ ಸೇರ್ಪಡೆ, 9-10ನೇ ತರಗತಿ ಕನ್ನಡ ಕೈಬಿಟ್ಟಿದ್ದ ನಾಗೇಶ್ ಹೆಗಡೆ, ಪಿ.ಲಂಕೇಶ್, ಶ್ರೀನಿವಾಸ ಉಡುಪ ಅವರ ಕವನ ಹೊಸದಾಗಿ ಸೇರ್ಪಡೆ ಮಾಡಲಾಗಿದೆ.