ಪುತ್ತೂರು: ಶತ್ರುದೇಶ ಪಾಕಿಸ್ತಾನಕ್ಕೆ ಜೈಕಾರ ಹಾಕುವುದರ ಜತೆಗೆ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿಕೊಂಡವರ ಪರವಾಗಿರುವ ರಾಜ್ಯ ಸರಕಾರ ಕ್ಷಮೆಗೆ ಅನರ್ಹರು. ತಕ್ಷಣ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ರಾಷ್ಟ್ರದ್ರೋಹಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಒಳಪಡಿಸಬೇಕು ಎಂದು ನ್ಯಾಯವಾದಿ ಅನಿಲ್ ಕುಮಾರ್ ದಡ್ಡು ಆಗ್ರಹಿಸಿದರು.
ಅವರು ಬುಧವಾರ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ವತಿಯಿಂದ ಪಾಕಿಸ್ತಾನದ ಪರ ಜೈಕಾರ ಹಾಕಿದವರನ್ನು, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ದರ್ಬೆ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೀಗ ಭಯೋತ್ಪಾದನಾ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಲು ತುಮಕೂರಿಗೆ ತೆರಳಿರುವ ಹಿಂದೂ ಸಂಘ ಪರಿವಾರದ ಮುಖಂಡ ಮುರಳೀಕೃಷ್ಣ ಹಸಂತಡ್ಕ ಅವರನ್ನು ಬಂಧಿಸುವ ಮೂಲಕ ಜೇನು ನೊಣದ ಗೂಡಿಗೆ ಕೈ ಹಾಕುವ ಕೆಲಸ ಕಾಂಗ್ರೆಸ್ ಸರಕಾರ ಮಾಡಿದೆ. ಈ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸಕ್ಕೆ ಕೈಹಾಕಿದೆ. ಇಂತಹಾ ನೂರಾರು ಜೇನು ನೋಣಗಳು ಮತ್ತೆ ಮತ್ತೆ ಹುಟ್ಟಲಿವೆ. ತಕ್ಷಣ ಅವರ ಮೇಲಿನ ಕೇಸನ್ನು ವಾಪಾಸು ತೆಗೆದುಕೊಂಡು ಬಂಧಮುಕ್ತಗೊಳಿಸಿ ಎಂದು ಆಗ್ರಹಿಸಿದ ಅವರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜ್ಯ ಸರಕಾರದ ರಾಷ್ಟ್ರಭಕ್ತರನ್ನು ಮುಟ್ಟುವ ಕೆಲಸ ಮಾಡಿದರೆ ಕೈ ಸುಟ್ಟುಹೋಗಲಿದೆ ಎಂದು ಎಚ್ಚರಿಕೆ ನೀಡಿದರು.
ಪಾಕಿಸ್ತಾನದ ಏಜೆಂಟ್ ಗಳಂತೆ ವರ್ತಿಸಬೇಡಿ. ತಕ್ಷಣ ಸಣ್ಣತನದ ರಾಜಕಾರಣ ಬಿಟ್ಟು ರಾಷ್ಟ್ರಭಕ್ತರ ಪರವಾಗಿ ನಿಲ್ಲಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದೀತು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡರಾದ ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ, ಕಿಶೋರ್ ಬೊಟ್ಯಾಡಿ, ಚಂದ್ರಶೇಖರ ರಾವ್ ಬಪ್ಪಳಿಗೆ, ರಮೇಶ್ ರೈ, ಆಶಾ ತಿಮ್ಮಪ್ಪ, ವಿದ್ಯಾ ಆರ್. ಗೌರಿ, ದೀಕ್ಷಾ ಪೈ, ಜಯಶ್ರೀ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಸೀತಾರಾಮ ರೈ ಕೆದಂಬಾಡಿಗುತ್ತು, ಹಿಂದೂ ಸಂಘಟನೆಯ ಡಾ.ಕೃಷ್ಣಪ್ರಸನ್ನ, ರವೀಂದ್ರ ರೈ, ಅಜಿತ್ ರೈ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.
ವಿಶಾಕ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.