ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗ, ಸಯನ್ಸ್ ಫಾರಮ್, ಆಂತರಿಕ ಗುಣಮಟ್ಟ ಭರವಸೆ ಕೋಶ, ಹಾಗೂ ಐಐಸಿಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ವಿಜ್ಞಾನ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋ, ವಿದ್ಯಾರ್ಥಿಗಳು ವಿಜ್ಞಾನದ ಮಹತ್ವವನ್ನು ಅರಿತುಕೊಂಡು ವೈಜ್ಞಾನಿಕ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಅನ್ವೇಷಣೆಗಳಲ್ಲಿ ಶ್ರದ್ಧೆ, ಉತ್ಸಾಹ ಮತ್ತು ಸಮರ್ಪಣೆಯ ಪ್ರಾಮುಖ್ಯತೆಯನ್ನು ತಿಳಿದುಕೊಂಡು ಯುವ ಪೀಳಿಗೆಯು ತಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳನ್ನು ವೈಜ್ಞಾನಿಕ ತತ್ವಗಳೊಂದಿಗೆ ಜೋಡಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎ.ಪಿ.ರಾಧಾಕೃಷ್ಣ, ವಿದ್ಯಾರ್ಥಿಗಳಿಗೆ ಖಗೋಳ ವಿಜ್ಞಾನದ ಕೌತುಕಗಳನ್ನು ವಿವರಿಸಿದರು. ಮೂಲ ವಿಜ್ಞಾನದ ಬಗ್ಗೆ ಒಲವು ಮೂಡಿಸಲು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಬರವಣಿಗೆಗಳ ಮೂಲಕ ಮೂಲ ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಸಾಮಾಜಿಕ ಜವಾಬ್ದಾರಿಯ ಬಗ್ಗೆ ತಿಳಿಸಿದರು.
ಕಾಲೇಜಿನ ಸಯನ್ಸ್ ಫಾರಮ್‌ನ ಸಂಯೋಜಕ, ಉಪ-ಪ್ರಾಂಶುಪಾಲ ಡಾ. ಪಿ. ಎಸ್.ಕೃಷ್ಣ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಕೃತಿ ಕೆ ಎನ್, ಮಲಿಹಾ, ರಿಯಾ ಡಿ ಸೋಜ ಮತ್ತು ಅಂಜುಂ ನಿಹಾಲ ರವರು ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆಯ ಬಗ್ಗೆ ಪವರ್ ಪಾಯಿಂಟ್ ಪ್ರೆಸಂಟೇಶನ್ ಪ್ರಸ್ತುತ ಪಡಿಸಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಥೆಯನ್ನು ತೃತೀಯ ಬಿ ಎಸ್ಸಿ ವಿದ್ಯಾರ್ಥಿ ವಿನೀತ್ ಲೋಬೋ ನಡೆಸಿದರು.
ಪ್ರತೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ. ಮಾಲಿನಿ ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ವಾರಿಜಾ ಎಂ. ವಂದಿಸಿದರು. ವಿದ್ಯಾರ್ಥಿನಿ ನಾದ ಐ.ಎ. ಕಾರ್ಯಕ್ರಮ ನಿರೂಪಿಸಿದರು.