ಪುತ್ತೂರು: ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಸಮಾವೇಶದ ಮೂಲಕ ಅವಲೋಕನ ನಡೆಸಲಾಗುತ್ತಿದ್ದು, ದ.ಕ. ಜಿಲ್ಲೆಯಲ್ಲಿ ಮಾ. 6 ರಿಂದ 10 ರ ವರೆಗೆ ಆಯಾ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ. ಪುತ್ತೂರಿನಲ್ಲಿ ಮಾ. 7 ರಂದು ಗ್ಯಾರಂಟಿ ಸಮಾವೇಶ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಪೂರ್ವಾಹ್ನ 11 ಗಂಟೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಮಂತ್ರಿಸಿದ್ದು, ಭಾಗವಹಿಸುವ ಸಾಧ್ಯತೆ ಇದೆ. ಹಲವು ಮಂದಿ ಸಚಿವರೂ ಭಾಗವಹಿಸಲಿದ್ದಾರೆ ಎಂದರು.
20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಇದೊಂದು ಸರಕಾರಿ ಕಾರ್ಯಕ್ರಮವಾಗಿದೆ. ಪಕ್ಷದ ಕಾರ್ಯಕ್ರಮವಲ್ಲ. ಫಲಾನುಭವಿಗಳನ್ನು ಸರಕಾರದ ವತಿಯಿಂದಲೇ ಸಮಾವೇಶಕ್ಕೆ ಕರೆತರಲಾಗುತ್ತದೆ. ಇದಕ್ಕಾಗಿ ಪ್ರತೀ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶ ಸ್ಥಳದಲ್ಲಿ ಎಲ್ಲ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು, ದೂರು ಸ್ವೀಕರಿಸಲು ಪ್ರತ್ಯೇಕ ಕೌಂಟರ್ ತೆರೆಯಲಾಗುತ್ತದೆ ಎಂದರು.