ಪುತ್ತೂರು: ನಿತ್ಯ ದೈನಂದಿನ ಚಟುವಟಿಕೆಗಳ ನಡುವೆಯೂ ನಾವು ಯಾವುದಾದರೊಂದು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಾಗ ಎದುರಾಗುವ ಯಶಸ್ಸು ಹಾಗೂ ಸೋಲನ್ನು ಸಮನಾಗಿ ಸ್ವೀಕರಿಸಿ ಮುಂದಡಿಯಿಟ್ಟಾಗ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ಹೇಳಿದರು.
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಂಪ್ಯ ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ “ಸ್ಪೈರೋ ,2024″ನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಪಥ ಸಂಚಲನದ ಗೌರವ ವಂದನೆಯನ್ನು ಸ್ವೀಕರಿಸಿ, ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಪುತ್ತೂರು ತಾಲೂಕು ನಿವೃತ್ತ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಮಾಧವ ಬಿ.ಕೆ ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಯಾವುದೇ ಚಟುವಟಿಕೆ ಮಾಡಲು ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಕ್ರೀಡಾಪಟುಗಳಿಗೆ ಕ್ರೀಡಾಂಗಣದಲ್ಲಿ ಮಾತ್ರ ವೈರಿಗಳು ಆದರೆ ಕ್ರೀಡಾಂಗಣದ ಹೊರಗೆ ಎಲ್ಲರೂ ಮಿತ್ರರು. ವಿದ್ಯಾರ್ಥಿಗಳು ಭಾರತೀಯ ಸೇನೆಯಲ್ಲಿ ಗುರುತಿಸುವಂತಾಗಬೇಕು ಎಂದರು.
ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಕೂಟದಲ್ಲಿನ ಪಥಸಂಚಲನದಲ್ಲಿ ಯಾವುದೇ ತರಬೇತಿ ಪಡೆಯದೆ ಬಹಳ ಶಿಸ್ತುಬದ್ಧವಾಗಿ ಭಾಗವಹಿಸಿರುವುದು ಹೆಮ್ಮೆ ತಂದಿದೆ. ಜೀವನದಲ್ಲಿ ಸೋಲು-ಗೆಲುವು ಇರುತ್ತದೆ. ಆದರೆ ಸೋಲನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಿ ಜಯಿಸುವತ್ತ ಹೆಜ್ಜೆ ಇಡಬೇಕು ಎಂದರು.
ಕೊಂಬೆಟ್ಟು ಜ್ಯೂನಿಯರ್ ಕಾಲೇಜ್ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಜಾನೆಟ್ ಪಾಯಿಸ್ ಶುಭ ಹಾರೈಸಿದರು. ಕ್ರೀಡಾಕೂಟಕ್ಕೆ ಸಹಕರಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಮೋನಪ್ಪ ಎಂ, ನವೀನ್, ಮನೋಹರ್ ಮೆದು, ದಾಮೋದರ್, ಪ್ರಸಾದ್ ರವರನ್ನು ಅಭಿನಂದಿಸಲಾಯಿತು. ಕಾಲೇಜು ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥಿಸಿದರು. ಉಪನ್ಯಾಸಕ ಹರೀಶ್ಚಂದ್ರ ಸ್ವಾಗತಿಸಿದರು. ಉಪನ್ಯಾಸಕರಾದ ಕಿಶೋರ್ ಕುಮಾರ್, ಪ್ರಭಾ, ಕಾಲೇಜು ಆಡಳಿತ ಸಮಿತಿ ಸದಸ್ಯ ನಾರಾಯಣ ಕೆ.ವಿ. ಅತಿಥಿಗಳನ್ನು ಗೌರವಿಸಿದರು. ಕ್ರೀಡಾ ಸಂಯೋಜಕ ರಕ್ಷಣ್ ಟಿ.ಆರ್ ಪ್ರಮಾಣವಚನ ಬೋಧಿಸಿ, ವಂದಿಸಿದರು. ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕ ವೃಂದ, ಆಡಳಿತ ಸಿಬ್ಬಂದಿ ವರ್ಗ ಸಹಕರಿಸಿದರು.