ಬಂಟ್ವಾಳ: ರಾಜ್ಯ ಕಾಂಗ್ರೇಸ್ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ, ವಿಶ್ವಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾ ವತಿಯಿಂದ ಬಿಸಿರೋಡಿನಲ್ಲಿ ಬೃಹತ್ ಪ್ರತಿಭಟನೆ ನಡೆದು, ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಕಾರ್ಯಕರ್ತರನ್ನು ಬಂಟ್ವಾಳ ಪೋಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನಿರಂತರವಾಗಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿ ಅಶಾಂತಿಯನ್ನು ಸೃಷ್ಟಿ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.
ಜೊತೆಗೆ ಬಿಜೆಪಿ ಸರಕಾರ ಜಾರಿಗೆ ತಂದ ಗೋತ್ಯೆ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಂಡು ನಿರಂತರವಾಗಿ ಗಲಬೆ ನಡೆಯಲು ಕಾರಣವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರಿಗೆ ಅಪಮಾನ ಮಾಡಿದ ಕಾಂಗ್ರೆಸ್ ಬಳಿಕ ಶಾಲಾ ಪಾಠ ಪುಸ್ತಕಗಳಲ್ಲಿ ಇದ್ದ ರಾಷ್ಟ್ರೀಯತೆಯ ವಿಚಾರಗಳನ್ನು ತೆಗೆದುಹಾಕಿದೆ ಎಂದು ಆರೋಪ ಮಾಡಿದರು. ಮುಂದುವರಿದ ಭಾಗವಾಗಿ ಶಾಲೆಗಳಲ್ಲಿ ಶ್ರೀ ರಾಮನನ್ನು ಅವಹೇಳನಕಾರಿಯಾಗಿ ಶಿಕ್ಷಕಿ ಮಾತನಾಡಿದ್ದು ಇದಕ್ಕೆ ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು.

ಮಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಗಳನ್ನು ಕಾಂಗ್ರೆಸ್ ನಾಯಕರೋರ್ವರು ಬ್ರದರ್ಸ್ ಎಂದು ಹೇಳಿಕೊಂಡ ಪರಿಣಾಮವಾಗಿ ಅವರು ಇಂದು ಮತ್ತೆ ಬೆಂಗಳೂರು ನಗರದಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದರು, ವಿಧಾನ ಸೌಧದೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದರು ಎಂದು ಗುಡುಗಿದ ಅವರು ಸರಕಾರದ ಧೋರಣೆ ಸಾರ್ವಜನಿಕರನ್ನು ತಲೆತಗ್ಗಿಸುವಂತೆ ಮಾಡಿದೆ ಎಂದು ಹೇಳಿದರು. ಅಂತಹ ದೇಶ ದ್ರೋಹದ ಕೆಲಸ ಮಾಡುವ ಆರೋಪಿಗಳನ್ನು ರಕ್ಷಣೆ ಮಾಡುವ ಕಾಂಗ್ರೆಸ್ ಸರಕಾರ ಬಜೆಟ್ ನಲ್ಲಿ ಕೋಟ್ಯಾಂತರ ರೂ ಹಣವನ್ನು ಅಲ್ಪಸಂಖ್ಯಾತ ಕಲ್ಯಾಣಕ್ಕೆ ಇರಿಸಿದೆ ಎಂದು ಆರೋಪ ಮಾಡಿದರು.
ಇವರ ಹಿಂದೂ ವಿರೋಧಿನೀತಿಯಿಂದ ಪೋಲೀಸರು ದೇಶದ್ರೋಹಿಗಳ ಹಿಂದೆ ಬೀಳದೆ,ದೇಶದ ರಕ್ಷಣೆಗೆ ಪಣತೊಟ್ಟ ಹಿಂದೂಕಾರ್ಯಕರ್ತರ ಮನೆಗೆ ಮಧ್ಯ ರಾತ್ರಿ ವೇಳೆ ನುಗ್ಗುತ್ತಾರೆ, ಹಿಂದೂ ಕಾರ್ಯಕರ್ತರ ಮೇಲೆ ಗೂಂಡ ಕಾಯ್ದೆಯನ್ನು ಹಾಕಲಾಗುತ್ತದೆ ಇದು ಬೇಸರದ ಸಂಗತಿ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ| ಪ್ರಸನ್ನ ಮಾತನಾಡಿ, ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಮಣಿದು ಪೋಲೀಸರು ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ರಾಷ್ಟ್ರೀಯ ವಿಚಾರದಲ್ಲಿ ಸಮಾಜದ ಹಿತದೃಷ್ಟಿಯಿಂದ ಹೋರಾಟ ಮಾಡುವ ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಗೂಂಡ ಕಾಯ್ದೆ ಹಾಕಿ ಬೆದರಿಸುವ ಕಾರ್ಯ ನಡೆಯುತ್ತಿರುವುದನ್ನು ಸಮಾಜ ಸಹಿಸುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಸಂಚಾಲಕ ಭರತ್ ಕುಮ್ಡೆಲು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಾ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಕೇಶವ್, ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಜಿಲ್ಲಾ ಬಜರಂಗದಳ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಬಜರಂಗದಳ ಬಂಟ್ವಾಳ ಪ್ರಖಂಡ ಸಂಯೋಜಕ್ ಶಿವಪ್ರಸಾದ ತುಂಬೆ, ವಿಶ್ವ ಹಿಂದೂ ಪರಿಷದ್ ಕಲ್ಲಡ್ಕ ಪ್ರಖಂಡ ಅಧ್ಯಕ್ಷ ಸಚಿನ್ ಮೆಲ್ಕಾರ್, ಬಿಜೆಪಿ ಪ್ರಮುಖರಾದ ದೇವಪ್ಪ ಪೂಜಾರಿ, ಎ.ಗೋವಿಂದ ಪ್ರಭು, ಕಿಶೋರ್ ಕುಮಾರ್ ಬೊಟ್ಯಾಡಿ, ದೇವದಾಸ್ ಶೆಟ್ಟಿ, ರಾಮ್ ದಾಸ ಬಂಟ್ವಾಳ, ಚೆನ್ನಪ್ಪ ಆರ್ ಕೋಟ್ಯಾನ್, ದಿನೇಶ್ ಅಮ್ಟೂರು ಮತ್ತಿತರು ಪ್ರಮುಖರು ಹಾಜರಿದ್ದರು.