ಪೆರ್ಲ: ಪೆರ್ಲ ಪೇಟೆಯ ವ್ಯಾಪಾರಿಯೊಬ್ಬರ ಮೃತದೇಹ ಮನೆ ಸಮೀಪದ ತೋಟದ ಕರೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ವಿನಾಯಕ ಸ್ಟೋರ್ಸ್ ಮಾಲಕ, ಪಳ್ಳತ್ತಮೂಲೆ ನಿವಾಸಿ ಶ್ರೀರಾಮ್ ಭಟ್ (52) ಎಂಬವರ ಮೃತದೇಹ ಮನೆ ಸಮೀಪದ ತೋಟದ ಕೆರೆಯಲ್ಲಿ ಗುರುವಾರ ರಾತ್ರಿ ಪತ್ತೆಯಾಗಿದೆ.
ಪೆರ್ಲ ಪೇಟೆಯಲ್ಲಿ ಕಳೆದ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಶ್ರೀರಾಮ್ ಭಟ್ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸದಸ್ಯರಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಅವರು ಅಂಗಡಿಯನ್ನು ಸರಿಯಾಗಿ ತೆರಯುತ್ತಿರಲಿಲ್ಲ. ಎರಡು ವಾರ ಹಿಂದೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಕಾರಣ ಬದುಕಿದ್ದರು.
ಗುರುವಾರ ಮಧ್ಯಾಹ್ನ ಊಟದ ಬಳಿಕ ಮನೆಯಿಂದ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ರಾತ್ರಿ ವೇಳೆ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರಿಗೆ ಪತ್ನಿ, ಪುತ್ರ ಇದ್ದಾರೆ.
ಬದಿಯಡ್ಕ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.