ಸರಕಾರದ ರಿಯಾಯಿತಿ ದರದ ಸಾಲಗಳು ದ.ಕ., ಉಡುಪಿಯಲ್ಲಿ ಅನುಷ್ಠಾನವಾಗಿಲ್ಲ | ಅಧಿವೇಶನದಲ್ಲಿ ಸರಕಾರದ ಗಮನಸೆಳೆದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ರಾಜ್ಯ ಸರಕಾರ ಕೃಷಿಕರ, ರೈತರ ಪರವಾಗಿದೆ. ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತ 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿತ್ತು. ಶೇ. 3 ಬಡ್ಡಿದರದಲ್ಲಿ ಕೃಷಿಕರಿಗೆ ದೊರೆಯುತ್ತಿದ್ದ ಸಾಲದ ಮೊತ್ತವನ್ನು 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದೆ. ಆದರೆ ಈ ಎರಡೂ ಯೋಜನೆಗಳು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ ಇದುವರೆಗೂ ಯಾವುದೇ ಕೃಷಿಕರಿಗೆ ಯೋಜನೆಯು ತಲುಪಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದರು.

ಅಧಿವೇಶನದಲ್ಲಿ ಮಾತನಾಡಿದ ಶಾಸಕರು, ಸರಕಾರ ಕೃಷಿಕರು, ರೈತರಿಗೆ ನೆರವಾಗಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಸರಕಾರ ನೀಡಿದ ಸೌಲಭ್ಯವನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಆದರೆ ಈ ಯೋಜನೆಯಿಂದ ಕರಾವಳಿ ಜಿಲ್ಲೆಯ ಕೃಷಿಕರು ವಂಚಿತರಾಗಿದ್ದಾರೆ. ಉಭಯ ಜಿಲ್ಲೆಗಳ ಯಾವುದೇ ಸಹಕಾರಿ ಸಂಘಗಳಲ್ಲಿ ಈ ಸಾಲವನ್ನು ಕೃಷಿಕರಿಗೆ ನೀಡುತ್ತಿಲ್ಲ ಎಂದು ಸರಕಾರದ ಗಮನಕ್ಕೆ ತಂದರು. ಈಗಾಗಲೇ 6715 ಅರ್ಜಿಗಳು ಬಂದಿದ್ದು ಈ ಪೈಕಿ 6354 ಅರ್ಜಿದಾರರಿಗೆ ಸಾಲ ನೀಡಲಾಗಿದೆ. ದಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರು ಮಾತ್ರ ಈ ಸಾಲದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ಸಹಕಾರಿ ಸಂಘಗಳಲ್ಲಿ ಸಾಲವನ್ನು ನೀಡುತ್ತಿಲ್ಲ ಎಂದು ಅಧಿವೇಶನದಲ್ಲಿ ಪ್ರಶ್ನಿಸಿದ ಶಾಸಕರು, ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದ.ಕ. ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಗೆ ಸರಕಾರದ ಕೃಷಿ ಸಾಲ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪೀಕರ್ ಯು ಟಿ ಖಾದರ್ ಧ್ವನಿಗೂಡಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top