ಪುತ್ತೂರು: ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ. ಮತದಾನ ನಮ್ಮೆಲ್ಲರ ಹಕ್ಕು ಜತೆಗೆ ಕರ್ತವ್ಯವೂ ಆಗಿದೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ಮತದಾನದಲ್ಲಿ ಪಾಲ್ಗೊಂಡಾಗ ಮಾತ್ರವೇ ಯೋಗ್ಯ ಸರಕಾರವನ್ನು ಪಡೆಯಲು ಸಾಧ್ಯ ಎಂದು ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಲಾದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ಇತಿಹಾಸ ಹಾಗೂ ಪ್ರಾಮುಖ್ಯತೆ ಇದೆ. ಭಾರತವು ಸ್ವತಂತ್ರವಾಗುವುದಕ್ಕೂ ಹಿಂದೆ ಮತದಾನದ ಸ್ವಾತಂತ್ರ್ಯ ಎಲ್ಲಾ ಪ್ರಜೆಗಳಿಗೂ ಇರಲಿಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲರೂ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯಕುಮಾರ್ ಎಂ. ಅಧ್ಯಕ್ಷತೆ ವಹಿಸಿ, ವಿವೇಚನೆಯಿಂದ ಮತ ಚಲಾಯಿಸಬೇಕು ಹಾಗೂ ಮತದಾನದಲ್ಲಿ ಆಲಕ್ಷ್ಯ ಸಲ್ಲದು ಎಂದು ಹೇಳಿದರು. ಕಿರಣ್ ಹಾಗೂ ಕೀರ್ತಿ ಪ್ರಾರ್ಥಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಾಸುದೇವ ಎನ್. ಸ್ವಾಗತಿಸಿದರು. ಮನೋಜ್ ವಂದಿಸಿದರು. ಅನಘ ರೈ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.