ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ 377 ಸೀಟು ಗೆಲ್ಲಲಿದೆ. ಇಂಡಿಯಾ ಕೂಟಕ್ಕೆ ಕೇವಲ 93 ಸೀಟು ಬರಲಿವೆ ಎಂದು ಝೀ ನ್ಯೂಸ್ – ಮ್ಯಾಟ್ರಿಜ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಕಳೆದ ಚುನಾವಣೆಯಲ್ಲಿ ಎನ್ ಡಿ ಎ 351 ಹಾಗೂ ಯುಪಿಎ 90 ಸ್ಥಾನ ಗಳಿಸಿದ್ದವು. ಇದೇ ವೇಳೆ, ಕರ್ನಾಟಕದಲ್ಲಿ ಎನ್ ಡಿ ಎ 23 ಹಾಗೂ ಕಾಂಗ್ರೆಸ್ 5 ಸ್ಥಾನ ಗೆಲ್ಲಲ್ಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರರು 1 ಸ್ಥಾನ ಗಳಿಸಿದ್ದರು. ಈ ವರ್ಷದ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆಗಳು ಹಲವು ಹಂತಗಳಲ್ಲಿ ನಡೆಯಲಿದೆ.
ಇಂದು ಬಿಜೆಪಿ 100 ಅಭ್ಯರ್ಥಿ ಪಟ್ಟಿ ಪ್ರಕಟ ?:
ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಬಿಜೆಪಿ ಗುರುವಾರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ಇದಕ್ಕಾಗಿ ಹಲವು ರಾಜ್ಯಗಳ ಬಿಜೆಪಿ ನಾಯಕರ ಜೊತೆ ಪರಿಷ್ಟರು ಬುಧವಾರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದ್ದಾರೆ. ಪ್ರಧಾನಿ ಮೋದಿ ಈಗ ವಾರಣಾಸಿಯಿಂದ ಸಂಸದರಾಗಿದ್ದಾರೆ. ಅಲ್ಲಿ ಅವರು 2 ಬಾರಿ ಗೆದ್ದಿದ್ದಾರೆ. ಅಮಿತ್ ಶಾ 2019 ರ ಚುನಾವಣೆಯಲ್ಲಿ ಲೋಕಸಭೆಗೆ ಗಾಂಧಿನಗರದಿಂದ ಸ್ಪರ್ಧಿಸಿ ಗೆದ್ದಿದ್ದರು.