ಪುತ್ತೂರು: ಪುತ್ತೂರು ಪೇಟೆಯಲ್ಲಿ ಹಲವಾರು ಕಡೆಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ನಗರದ ಗಾಂಧಿಕಟ್ಟೆ, ಅರುಣಾ ಕಲಾ ಮಂದಿರ, ಸಚಿನ್ ಟ್ರೇಡಿಂಗ್ ಮುಂಭಾಗದ ರಸ್ತೆ, ತೆಂಕಿಲ ವಿವೇಕಾನಂದ ಶಾಲೆಗೆ ತೆರಳುವ ಇಳಿಜಾರಿನಲ್ಲಿ ಮುಂತಾದ ಹಲವು ಕಡೆಗಳಲ್ಲಿ ರಸ್ತೆಗಳನ್ನು ಅಗೆದು ದುರಸ್ತಿ ಮಾಡಲಾಗದೆ ಹಾಗೇ ಬಿಡಲಾಗಿದೆ. ಪರಿಣಾಮ ಅಪಘಾತಗಳಾಗುವ ಸಂಭವವಿದ್ದು, ತಕ್ಷಣ ರಸ್ತೆಗಳನ್ನು ಪರಿಶೀಲಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಾಮನ್ ಪೈ, ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾ, ಕಾರ್ಯದರ್ಶಿಗಳಾದ ಪಿ.ಉಲ್ಲಾಸ್ ಪೈ, ಮನೋಜ್ ಟಿ.ವಿ. ಉಪಸ್ಥಿತರಿದ್ದರು.