ಜಾತಿ ಗಣತಿ ವರದಿ ಇಂದು ಸಲ್ಲಿಕೆ | ರಾಜಕೀಯ ಬಿರುಗಾಳಿ ಎಬ್ಬಿಸುವ ನಿರೀಕ್ಷೆ

ಬೆಂಗಳೂರು : ಬಹುಕಾಲದಿಂದ ನಿರೀಕ್ಷಿಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಗಣತಿ ವರದಿ ಇಂದು ಸರಕಾರಕ್ಕೆ ಸಲ್ಲಿಕೆಯಾಗಲಿದೆ. ವರದಿಯನ್ನು ಗುರುವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ತಿಳಿಸಿದ್ದಾರೆ.

ಈ ವರದಿಗೆ ಒಕ್ಕಲಿಗ, ಲಿಂಗಾಯತ ಸೇರಿ ಕೆಲವು ಸಮುದಾಯದ ವಿರೋಧ ಇರುವುದರಿಂದ ವರದಿ ರಾಜಕೀಯ ಬಿರುಗಾಳಿ ಎಬ್ಬಿಸಬಹುದು ಎಂಬ ನಿರೀಕ್ಷೆ ಇದೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೇ ವರದಿಗೆ ಅಪಸ್ವರ ಎತ್ತಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಡುಗಡೆಯಾಗುವ ವರದಿ ಯಾವೆಲ್ಲ ಪರಿಣಾಮಗಳನ್ನು ಬೀರಬಹುದು ಎಂಬ ಕುತೂಹಲ ಇದೆ.

ಹಿಂದೆ ಕಾಂತರಾಜು ಅವರು ಅಧ್ಯಕ್ಷರಾಗಿದ್ದಾಗ ಸಂಗ್ರಹಿಸಿರುವ ದತ್ತಾಂಶ ಆಧಾರದ ಮೇಲೆ ವರದಿ ನೀಡುವಂತೆ ಸರ್ಕಾರ ಹೇಳಿತ್ತು. ಅದರಂತೆ, ವರದಿ ಸಿದ್ಧಪಡಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಅಂದು ರಾಜ್ಯದೆಲ್ಲೆಡೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಾಗಿತ್ತು. ಪ್ರತಿ ಮನೆಯ ಕುಟುಂಬದ ಸದಸ್ಯರು, ಉದ್ಯೋಗ, ಜಾತಿ, ಶಿಕ್ಷಣ, ಆಸ್ತಿ ಸೇರಿದಂತೆ ಒಟ್ಟು 54 ಪ್ರಶ್ನೆಗಳನ್ನು ಕೇಳಿ ದತ್ತಾಂಶ ಸಂಗ್ರಹಿಸಲಾಗಿದೆ. ಅದನ್ನು ಬಿಇಎಲ್‌ ಸಾಫ್ಟ್‌ವೇರ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಈ ವರದಿ ಆಧಾರದ ಮೇಲೆ ಜನರಿಗೆ ಮುಂದಿನ ದಿನಗಳಲ್ಲಿ ಅಗತ್ಯ ಸೌಕರ್ಯಗಳನ್ನು ನೀಡಲು ಸಾಧ್ಯವಾಗುತ್ತದೆ.































 
 

2015-16ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 154 ಕೋಟಿ ರೂ. ವೆಚ್ಚದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಂದ ವಿರೋಧ ವ್ಯಕ್ತವಾದ ಕಾರಣ ಹಿಂದಿನ ಅವಧಿಯಲ್ಲಿ ಬಿಡುಗಡೆ ಮಾಡಿರಲಿಲ್ಲ. ವರದಿ ಲೋಪದೋಷಗಳಿಂದ ಕೂಡಿದ್ದು, ಮನೆಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸಿಲ್ಲ. ವರದಿ ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ಮಾಹಿತಿ ಸೋರಿಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಆರೋಪಗಳ ನಡುವೆಯೇ ಇದೀಗ ಸಾಮಾಜಿಕ, ಶೈಕ್ಷಣಿಕ ವರದಿಗೆ ರಾಜ್ಯದ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಎರಡು ಸಮುದಾಯಗಳ ಮಠಾಧೀಶರು ಹೊಸ ವರದಿ ಸಿದ್ಧಪಡಿಸಲು ಒತ್ತಾಯಿಸಿದ್ದಾರೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಹಲವು ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಯ ವರನ್ನು ಭೇಟಿ ಮಾಡಿ ವರದಿಗೆ ವಿರೋಧ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆ ವರದಿ ರಾಜಕೀಯ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ದಲಿತ ಸಂಘಟನೆಗಳು ಹಾಗೂ ರಾಜ್ಯದ ಕೆಲವು ಸಣ್ಣ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ ವರದಿ ಬಿಡುಗಡೆಗೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದವು. ವರದಿಗೆ ಬೆಂಬಲಿಸಿರುವ ಈ ಸಮುದಾಯಗಳ ಮುಖಂಡರು, ಮಠಾಧೀಶರುಗಳ ನಿಯೋಗಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಶೀಘ್ರದಲ್ಲೇ ವರದಿಯನ್ನು ಸ್ವೀಕರಿಸಿ, ಬಹಿರಂಗಪಡಿಸಿ, ಅದರಲ್ಲಿನ ಅಂಶಗಳನ್ನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top