ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿ.ಎಂ. ಯೋಗಿ ಆದಿತ್ಯನಾಥ್ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರದ ವೇಳೆ ಅರುಣ್ ಕುಮಾರ್ ಪುತ್ತಿಲ ಅವರು ಬಳಕೆ ಮಾಡಿರುವ ಕುರಿತು ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಕುಮಾರ್ ಪುತ್ತಿಲರು ಬಿಜೆಪಿ ಸರ್ವೋಚ್ಛ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಭಾವಚಿತ್ರಗಳನ್ನು ಬಳಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಚುನಾವಣಾ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುವಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿ ಕೇಸು ದಾಖಲಿಸಿಕೊಂಡ ಪೊಲೀಸರು 2023 ರ ಡಿ.7 ರಂದು ಅರುಣ್ ಕುಮಾರ್ ಪುತ್ತಿಲರಿಗೆ ನೋಟಿಸ್ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು.
ನೋಟೀಸ್ ನಲ್ಲಿ ಕಲಂ : 41 (ಎ) ಉಪ ಕಲಂ (1) ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಪುತ್ತೂರು ನಗರ ಠಾಣಾ ಅ.ಕ್ರ.24/2023 ಕಲಂ 123 (a), 125 Respresentation of People Act 1951 & 1988 ಪ್ರಕರಣದಲ್ಲಿ ತನಿಖೆಯ ಸಮಯ ಈ ಪ್ರಕರಣದಲ್ಲಿನ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತಪಡಿಸಕೊಳ್ಳುವುದಕ್ಕಾಗಿ ನಿಮ್ಮನ್ನು ವಿಚರಣೆಗೆ ಒಳಪಡಿಸಲು ಸಾಕಷ್ಟು ಪೂರಕ ಕಾರಣಗಳು ಕಂಡು ಬಂದಿರುತ್ತದೆ. ಆದ್ದರಿಂದ ಈ ನೋಟೀಸ್ ಸ್ವೀಕರಿಸಿದ ಕೂಡಲೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಖುದ್ದಾಗಿ ಹಾಜರಾಗಲು ಈ ಮೂಲಕ ನಿರ್ದೇಶಿಸಲಾಗಿದೆ ಎಂದು ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ನೋಟೀಸ್ ಜಾರಿ ಮಾಡಿದ್ದರು.
ಇದನ್ನು ಪ್ರಶ್ನಿಸಿ ಅರುಣ್ ಕುಮಾರ್ ಪುತ್ತಿಲ ಹೈ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ತನಿಖೆಗೆ ತಡೆ ಕೋರಿ ಆದೇಶಿಸಿದೆ. ಪುತ್ತಿಲ ಪರ ನ್ಯಾಯವಾದಿಗಳಾದ ಬೆಂಗಳೂರಿನ ಸಚಿನ್, ಪುತ್ತೂರಿನ ನರಸಿಂಹ ಪ್ರಸಾದ್ ವಾದಿಸಿದ್ದರು.