ಇಸ್ರೋ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾನಕ್ಕೆ ಆಯ್ಕೆಯಾದ ನಾಲ್ವರು ಗಗನಯಾತ್ರಿಗಳ ಹೆಸರು ಘೋಷಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ಘೋಷಣೆಗೆ ಸಾಕ್ಷಿಯಾಗಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಗಳಾದ ಪ್ರಶಾಂತ್ ನಾಯರ್, ಅಜಿತ್ ಕೃಷ್ಣನ್, ಅಂಗದ್ ಪ್ರತಾಪ್ ಹಾಗೂ ವಿಂಗ್ ಕಮಾಂಡರ್ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ವಿಂಗ್ ಗಳನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಲ್ಲಾ ಮಹಿಳಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಭಾರತ ಮತ್ತೆ ಚಂದ್ರಯಾನ ಕೈಗೊಳ್ಳಲಿದ್ದು, ಸದ್ಯದಲ್ಲೇ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಹೊಂದಲಿದೆ. ಭಾರತವು ತನ್ನ ಗುರಿ, ಸ್ಟಾಂಡರ್ಡ್‌ಗಳನ್ನು ಹೆಚ್ಚಿಸಿಕೊಳ್ಳಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ಎಫ್‌ಡಿಐಗೆ ಅವಕಾಶ ನೀಡಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇರಳದಲ್ಲಿರುವ ‘ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ’ಕ್ಕೆ ಭೇಟಿ ನೀಡಿದ್ದರು. ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾನ ಮಿಷನ್‌ಗೆ ಆಯ್ಕೆಯಾದ ಪೈಲಟ್‌ಗಳ ಹೆಸರನ್ನು ಪ್ರಕಟಿಸಿದ್ದು, ಗಗನಯಾನದ ಮಿಷನ್‌ಗಳ ಸಿದ್ಧತೆಯನ್ನು ಪರಿಶೀಲನೆ ಮಾಡಿದ್ದಾರೆ. 2025ರಲ್ಲಿ ಇಸ್ರೋ ತನ್ನ ಮಹತ್ವಾಕಾಂಕ್ಷಿಯ ಗಗನಯಾನ ನಡೆಸುವ ನಿರೀಕ್ಷೆ ಹೊಂದಲಾಗಿದೆ. ಬಾಹ್ಯಾಕಾಶ ನೌಕೆಯಲ್ಲಿ 3 ಗಗನಯಾತ್ರಿಗಳು 7 ದಿನಗಳ ಕಾಲ ಪ್ರಯಾಣ ಮಾಡಲಿದ್ದಾರೆ.