ಬೆಳ್ತಂಗಡಿ: ತಾಲೂಕಿನ ಪ್ರವಾಸಿ ಸ್ಥಳಗಳಿಗೆ ತೆರಳುವ ರಸ್ತೆಗಳನ್ನು ನನ್ನ ಕಳೆದ ಶಾಸಕತ್ವದ ಅವಧಿಯಲ್ಲಿ ಅಭಿವೃದ್ಧಿಪಡಿಸಿ ಜನತೆಗೆ ಕೊಡುಗೆಯಾಗಿ ನೀಡಲಾಗಿದ್ದು, ಇದೀಗ ಕೇಂದ್ರ ಸರಕಾರದ ನೆರವಿನಿಂದ ಕರಾವಳಿ ಕರ್ನಾಟಕದ ಮಂಗಳೂರನ್ನು ಸಂಪರ್ಕಿಸಲು ಎಲ್ಲ ಕಡೆಗಳಿಂದ ರಾಷ್ಟ್ರೀಯ ಹೆದ್ದಾರಿಗಳು ಸಿದ್ಧವಾಗುತ್ತಿದೆ. ಇನ್ನೆರಡು ವರ್ಷದಲ್ಲಿ ಬೆಂಗಳೂರಿನ ಐಟಿ ಕ್ಷೇತ್ರ ಉದ್ಯೋಗಿಗಳು ವಾರಾಂತ್ಯದಲ್ಲಿ ಜಿಲ್ಲೆಗೆ ಅತೀ ಸರಳವಾಗಿ ತಲುಪುವ ಕೊಂಡಿಯಾಗಿ ಅಭೂತಪೂರ್ವ ಪರಿವರ್ತನೆ ಕಾಣಲಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದರು.

ಅವರು ನಡ ಗ್ರಾಮದ ಮಂಜೊಟ್ಟಿ ಸನ್ ರಾಕ್ ರೆಸಾರ್ಟ್ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಿರುವ “ಸನ್ ರಾಕ್ ಬಲಿಪ ರೆಸಾರ್ಟ್” ನ್ನು ಉದ್ಘಾಟಿಸಿ ಮಾತನಾಡಿದರು.
ಒತ್ತಡದಿಂದ ಜೀವನ ಸಾಗಿಸುತ್ತಿರುವ ಜನತೆಗೆ ವಾರಾಂತ್ಯ ಸುಂದರವಾಗಿಸಲು ಇಂತಹಾ ರೆಸಾರ್ಟ್ ಗಳು ಅನುಕೂಲದಾಯಕ. ತಾಲೂಕಿನಲ್ಲಿರುವ ಪ್ರಕೃತಿ ರಮಣೀಯತೆ ಮತ್ತು ಶ್ರದ್ಧಾ ಕೇಂದ್ರಗಳ ಮೂಲಕ ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶದವಿದ್ದು, ಸರಿಯಾದ ಸಮಯದಲ್ಲಿ ಮುರಳಿ ಬಲಿಪ ಅವರು ಇದಕ್ಕೆ ಅಡಿಪಾಯ ಹಾಕಿದ್ದಾರೆ. ಆದ್ದರಿಂದ ಈ ರೆಸಾರ್ಟ್ ಗೆ ಭವಿಷ್ಯವಿದೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ನಿರಂತರ ಒತ್ತಡದಿಂದ ಬದುಕುವ ಇಂದಿನ ಸಮೂಹ ದೇಹಕ್ಕೆ ವ್ಯಾಯಾಮ ಕೊಡಲು ಪ್ರಯತ್ನಿಸುತ್ತದೆ. ಆದರೆ ಮನಸ್ಸಿಗೆ ಕೊಡುವುದಿಲ್ಲ. ಇತರ ದೇಶ ಸುತ್ತಿದಾಗ ಆಧ್ಯಾತ್ಮ ನಮ್ಮ ದೇಶದ ಶಕ್ತಿ ಎಂಬುದರ ಅರಿವು ನಮಗಾಗುತ್ತದೆ. ಪ್ರಕೃತಿ ಪ್ರೇಮದ ಜೊತೆಗೆ ನಾವೆಲ್ಲ ಆಧ್ಯಾತ್ಮಿಕದ ಅನುಭೂತಿಯ ಮೂಲಕ ನೆಮ್ಮದಿಯ ದಿನಗಳನ್ನು ತಂದುಕೊಳ್ಳೋಣ ಎಂದು ಹೇಳಿದರು.

ಬಲಿಪ ರೆಸಾರ್ಟ್ ಮಾಲಕ ಮುರಳಿ ಬಲಿಪ ಮಾತನಾಡಿ, ನಾವು ಕುಟುಂಬ ಸಮೇತರಾಗಿ ಬೇರೆಡೆಗೆ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ಅಷ್ಟೊಂದು ಪ್ರಭಾವಿತ ಸ್ಥಳವಲ್ಲದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಸಂಭ್ರಮಪಡುತ್ತಿದ್ದುದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ನಮ್ಮೂರಿನ ಸುತ್ತಮುತ್ತ ಇರುವ ಪ್ರಕೃತಿ ರಮಣೀಯತೆಯನ್ನು ಜಲಪಾತ ಹಾಗೂ ಸರ್ವಧರ್ಮೀಯ ಶ್ರದ್ಧಾ ಕೇಂದ್ರಗಳ ವೀಕ್ಷಣೆಯ ಅವಕಾಶವನ್ನು ಪ್ರವಾಸೋದ್ಯಮ ಬೇರೆ ಯಾಕೆ ಮಾಡಬಾರದು ಎಂಬುದಾಗಿ ಅಲ್ಲಿಂದಲೇ ಮೂಲ ಪ್ರೇರಣೆ ಪಡೆದು ಈ ಸಾಹಸಕ್ಕೆ ಕೈ ಹಾಕಿದ್ದೇನೆ. ನಮ್ಮ ಈ “ಬಲಿಪ ರೆಸಾರ್ಟ್” ಕೇವಲ ಲಾಭ ಗಳಿಸುವ ಗುರಿ ಮಾತ್ರ ಹೊಂದದೆ ತಾಲೂಕಿನ ಧಾರ್ಮಿಕ ಮತ್ತು ಪ್ರಾಕೃತಿಕ ಸೊಬಗನ್ನು ಇತರರಿಗೆ ಪರಿಚಯಿಸುವ ಮಹದಾಶಯ ಹೊಂದಿದೆ. ತಾಲೂಕಿಗೆ ಆಗಮಿಸುವವರಿಗೆ ಎಲ್ಲಾ ಮೂಲ ಸೌಕರ್ಯದೊಂದಿಗೆ ಹೊರಸಂಚಾರ ಪ್ರವಾಸವನ್ನೂ ಕೈಗೊಳ್ಳುವ ಮೂಲಕ ಇದನ್ನು ಬೆಳೆಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಧಕ, ತೂಗು ಸೇತುವೆಗಳ ಸರದಾರ ಡಾ. ಗಿರೀಶ ಭಾರದ್ವಾಜ್ ಸುಳ್ಯ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು. ಹೆಚ್ ಖಾಲಿದ್ ಉಜಿರೆ, ಹಿರಿಯ ನ್ಯಾಯವಾದಿ ಬಿ.ಕೆ ಧನಂಜಯ ರಾವ್, ನಡ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ, ಬಲಿಪ ಕುಟುಂಬಸ್ಥರಾದ ಶಶಿಧರ ಬಲಿಪ, ಸನ್ ರಾಕ್ ಸಮೂಹ ಸಂಸ್ಥೆಗಳ ಮಾಲಕ ಡೆನಿಸ್ ವಾಲ್ವರ್ ಸಿಕ್ಕೇರ, ಮುರಳಿ ಅವರ ಧರ್ಮಪತ್ನಿ ಮನೋರಮಾ ಎಂ ಬಲಿಪ, ಪುತ್ರ ಮಂದಾರ ಬಲಿಪ, ಸನ್ ರಾಕ್ ಸಮೂಹ ಸಂಸ್ಥೆ ಮಾಲಕರಾದ ವಾಲ್ವರ್ ಸಿಕ್ವೆರಾ ಉಪಸ್ಥಿತರಿದ್ದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ರೀಷನ್ ಸಿಕ್ವೆರ ವಂದಿಸಿದರು.
ಪ್ರಕೃತಿ ಪ್ರೇಮದ ಸಂಕೇತವಾಗಿ ಎಲ್ಲಾ ಅತಿಥಿಗಳಿಗೆ ಆಂಥೋರಿಯಂ ಗಿಡವನ್ನು ಸ್ಮರಣಿಕೆಯಾಗಿ ನೀಡಲಾಯಿತು. ಉದ್ಘಾಟನೆಯ ಅಂಗವಾಗಿ ರೆಸಾರ್ಟ್ ಒಳಗೆ ಸರ್ವರಿಗೂ ಉಚಿತ ಪ್ರವೇಶದೊಂದಿಗೆ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸವಿಯುವ ಅವಕಾಶ ಹಾಗೂ ಮಕ್ಕಳಿಗೆ ಮತ್ತು ಹಿರಿಯರಿಗೆ ಈಜು ಕೊಳ ಮತ್ತು ಎಡ್ವೆಂಚರ್ ಆಟಗಳನ್ನು ಬಳಸುವ ಅವಕಾಶಗಳ್ನು ಒದಗಿಸಲಾಗಿತ್ತು.