ಪುತ್ತೂರು: ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ಆವಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಲಿರುವ 20 ನೇ ವರ್ಷದ ಎಸ್‌ಡಿಪಿ ‘ಕಲೋಪಾಸನಾ -2024’ ಸಾಂಸ್ಕೃತಿಕ ಕಲಾ ಸಂಭ್ರಮಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.
ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ ಹಾಗೂ ಪಂಡಿತ್ ಜಯತೀರ್ಥ ಮೇವುಂಡಿ ಬೆಂಗಳೂರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.
ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಸಂಗೀತದ ಉತ್ತಮ ಕಾರ್ಯಕ್ರಮ ನೀಡುತ್ತಿದ್ದಾರೆ. ಪ್ರತಿ ವರ್ಷ ಕಾರ್ಯಕ್ರಮ ನಡೆಸುವ ಮೂಲಕ ಡಾ.ಹರಿಕೃಷ್ಣ ಪಾಣಾಜೆಯವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ ಮೊದಲಾದ ಕಲಾ ಕ್ಷೇತ್ರಗಳು, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಪಂಡಿತ್ ಜಯತೀರ್ಥ ಮೇವುಂಡಿ ಬೆಂಗಳೂರು ಮಾತನಾಡಿ, ಡಾ.ಹರಿಕೃಷ್ಣ ಪಾಣಾಜೆಯವರು ಒಬ್ಬರೇ ಸ್ವ ಪ್ರೇರಣೆಯಿಂದ ಕಾರ್ಯಕ್ರಮ ನೀಡುತ್ತಿರುವುದು ಅವರ ಸಾಧನೆಯಾಗಿದೆ. ಹಿರಿಯ, ಮಹಾನ್ ಕಲಾವಿದರ ಮೂಲಕ ಕಾರ್ಯಕ್ರಮ ನೀಡುತ್ತಿದ್ದು ಇಲ್ಲಿನ ಕಾರ್ಯಕ್ರಮ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದೆ. ಇಲ್ಲಿ ಕಾರ್ಯಕ್ರಮ ನೀಡುವ ಉತ್ತಮ ಅವಕಾಶ ನಮಗೂ ದೊರೆತಿದೆ ಎಂದರು.
ಸಂಸ್ಥೆಯ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖ, ಸುಜಾತ, ಮೇಘನಾ ಪಾಣಾಜೆ, ಕೇದಾರಕೃಷ್ಣ ಪಾಣಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಮಾಧವ ಭಟ್ ಸ್ವಾಗತಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಜುಗಲ್‌ಬಂದಿ ನಡೆಯಿತು. ಹಾಡುಗಾರಿಕೆಯಲ್ಲಿ ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ, ವಯಲಿನ್‌ನಲ್ಲಿ ವಿದ್ವಾನ್ ಬಿ.ಅನಂತಕೃಷ್ಣ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ಕೆ.ಯು ಜಯಚಂದ್ರ ರಾವ್ ಬೆಂಗಳೂರು, ಹಾಡುಗಾರಿಕೆಯಲ್ಲಿ ಪಂಡಿತ್ ಜಯತೀರ್ಥ ಮೇವುಂಡಿ ಬೆಂಗಳೂರು, ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟೆ ಹಾಗೂ ತಬಲದಲ್ಲಿ ಯಶವಂತ ವೈಷ್ಣವ್ ಸಹಕರಿಸಿದರು.