ಬೆಂಗಳೂರು: ರಾಜ್ಯ ಸರಕಾರವು ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟೇಬಲ್ ಎಂಡೋಮೆಂಟ್ ಬಿಲ್ 2024’ ಅಂಗೀಕರಿಸಿದ್ದು, ಈ ವಿಧೇಯಕ ಸರಕಾರಕ್ಕೆ ದೇವಸ್ಥಾನದಿಂದ ತೆರಿಗೆ ವಸೂಲಿ ಮಾಡುವ ಅಧಿಕಾರ ನೀಡುತ್ತದೆ. ಈ ವಿಧೇಯಕದ ಪ್ರಕಾರ ಹಿಂದೂ ದೇವಸ್ಥಾನದ ಆದಾಯ 1 ಕೋಟಿ ರೂಪಾಯಿ ಇದ್ದರೆ ಆಗ ಸರಕಾರ ಅದರ ಮೇಲೆ ಶೇಕಡ 10 ರಷ್ಟು ತೆರಿಗೆ ವಿಧಿಸುವುದು ಮತ್ತು ಅದರ ಆದಾಯ ಒಂದು ಕೋಟಿಗಿಂತಲೂ ಕಡಿಮೆ ಆದರೆ, 10 ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೆ ಅವರಿಗೆ ಸರಕಾರ ಶೇಕಡಾ 5 ರಷ್ಟು ತೆರಿಗೆ ವಿಧಿಸಬಹುದು. ದೇವಸ್ಥಾನದ ನಿರ್ವಹಣೆಯಲ್ಲಿ ಹಿಂದೂ ಮತ್ತು ಇತರ ಧರ್ಮದಲ್ಲಿನ ಸದಸ್ಯರ ನೇಮಕಾತಿ ಮಾಡಬಹುದು ಎಂದು ಹೇಳಿದ್ದು, ಬಿಜೆಪಿ ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಸರಕಾರ ಕೇವಲ ಹಿಂದುಗಳ ದೇವಸ್ಥಾನವನ್ನು ಏಕೆ ಗುರಿ ಮಾಡುತ್ತಿದೆ ಮತ್ತು ಬೇರೆ ಧರ್ಮಕ್ಕೆ ಏಕೆ ಇಲ್ಲ? ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ‘ಎಕ್ಸ್’ ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ನಿರಂತರವಾಗಿ ಹಿಂದೂ ವಿರೋಧ ನೀತಿಗಳನ್ನು ಅನುಸರಿಸುತ್ತಿದೆ. ಕಾಂಗ್ರೆಸ್ಸಿಗೆ ಹಿಂದೂ ದೇವಸ್ಥಾನದ ಆದಾಯದ ಮೇಲೆ ಕಣ್ಣಿದೆ. ಸರಕಾರವು ಅದರ ಖಾಲಿಯಾಗಿರುವ ಖಜಾನೆಯನ್ನು ತುಂಬುವುದಕ್ಕಾಗಿ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಚಾರಿಟೇಬಲ್ ಎಂಡೋಮೆಂಟ್ ಬಿಲ್ 2024’ ನ್ನು ಅಂಗೀಕರಿಸಿದೆ ಎಂದು ಆರೋಪಿಸಿದ್ದಾರೆ.
ದೇವಸ್ಥಾನದ ನಿಧಿಯಿಂದ ಸರಕಾರ ಇತರ ಉದ್ದೇಶಗಳನ್ನು ಪೂರ್ಣಗೊಳಿಸುವ ಗುರಿಯಾಗಿದೆ. ದೇವರಿಗಾಗಿ ಮತ್ತು ದೇವಸ್ಥಾನದ ವಿಕಾಸಕ್ಕಾಗಿ ಭಕ್ತರು ನೀಡಿರುವ ಅರ್ಪಣೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮತ್ತು ಭಕ್ತರ ಸೌಲಭ್ಯಕ್ಕಾಗಿ ಉಪಯೋಗಿಸಬೇಕು. ಇತರ ಯಾವುದೇ ಕಾರಣಕ್ಕೂ ಬಳಸಿದರೂ ಅದು ಭಕ್ತರಿಗೆ ವಂಚನೆ ಮಾಡಿದಂತೆ ಆಗುತ್ತದೆ ಎಂದು ಆರೋಪಿಸಲಾಗಿದೆ.
ಬಿಜೆಪಿ ವಿರೋಧದ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಪ್ರತ್ಯುತ್ತರ ನೀಡಿ, ಬಿಜೆಪಿ ಯಾವಾಗಲೂ ಕಾಂಗ್ರೆಸನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತ ಲಾಭ ಪಡೆಯುತ್ತದೆ. ಆದರೆ ನಾವು ಹಿಂದೂ ಧರ್ಮದ ನಿಜವಾದ ಬೆಂಬಲಿಗರಾಗಿದ್ದೇವೆ. ಏಕೆಂದರೆ ಕಳೆದ ಕೆಲವು ವರ್ಷದಲ್ಲಿ ಕಾಂಗ್ರೆಸ್ಸಿನಿಂದ ದೇವಸ್ಥಾನ ಮತ್ತು ಹಿಂದುಗಳ ಹಿತದ ರಕ್ಷಣೆ ಮಾಡಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರವು 16ನೇ ವಿಧಾನಸಭೆಯ ಮೂರನೇಯ ಅಧಿವೇಶನದಲ್ಲಿ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಜಾರಿಟೇಬಲ್ ಎಂಡೋಮೆಂಟ್ ಬಿಲ್ 2024’ ಅಂಗೀಕರಿಸುವಾಗ ಅದರಲ್ಲಿನ 25 ನೇ ಕಲಂ ನಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರ ನೇಮಕಾತಿ ಮಾಡಬಹುದು ಎಂದು ತಿದ್ದುಪಡಿ ಮಾಡಿದ್ದಾರೆ. ಈ ಹಿಂದೆ ಸುಧಾರಣೆಯಲ್ಲಿ ದೇವಸ್ಥಾನ ವ್ಯವಸ್ಥಾಪಕ ಸಮಿತಿಯಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಬೇರೆ ಯಾವುದೇ ಜನಾಂಗದ ಜನರನ್ನು ಸೇರಿಸಬಾರದೆಂದು ನಿರ್ಣಯಿಸಲಾಗಿತ್ತು. ಈಗ ರಾಜ್ಯ ಸರಕಾರವು ಅದರಲ್ಲಿ ಬದಲಾವಣೆ ಮಾಡಿರುವುದು ಖಂಡನೀಯವಾಗಿದೆ.. ಈ ದೇವಸ್ಥಾನದಲ್ಲಿ ಹಿಂದೂ ಧರ್ಮದ ಮೇಲೆ ಶ್ರದ್ಧೆ ಇಲ್ಲದಿರುವವರನ್ನು ನೇಮಿಸಿ ದೇವಸ್ಥಾನದ ಸಂಪ್ರದಾಯ ಭಗ್ನಗೊಳಿಸುವ ಷಡ್ಯಂತ್ರವಾಗಿದೆ. ಹಿಂದೂ ದೇವಸ್ಥಾನದಲ್ಲಿ ವ್ಯವಸ್ಥಾಪಕ ಸಮಿತಿಯಲ್ಲಿ ಇತರ ಧರ್ಮದವರನ್ನು ನೇಮಕಾತಿ ಮಾಡುವವರು ಮುಸಲ್ಮಾನ ಓಲೈಕೆ ಸರಕಾರ ವಕ್ಸ್ ಬೋರ್ಡಿನಲ್ಲಿ ಹಿಂದುಗಳನ್ನು ನೇಮಕಾತಿ ಮಾಡುವರೆ? ಸರಕಾರದ ಈ ವರ್ತನೆ ಹಿಂದೂ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ರಾಜ್ಯ ಸರಕಾರವು ತಕ್ಷಣ ಈ ಬದಲಾವಣೆ ರದ್ದು ಪಡಿಸಬೇಕು. ಇಲ್ಲವಾದರೆ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸುವೆವು, ಎಂದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆ ಮಹಾಸಂಘದ ರಾಜ್ಯ ಸಂಯೋಜಕ ಮೋಹನ ಗೌಡ ಪ್ರಸಿದ್ಧಿ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.