ಪುತ್ತೂರು : ನಗರದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನಡುವೆ ಯೋಗ ಶಿಕ್ಷಣದ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ ಗುರೂಜಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಕಳೆದ ಹದಿನಾಲ್ಕು ವರ್ಷಗಳಿಂದ ಅಂಬಿಕಾ ಶಿಕ್ಷಣ ಸಂಸ್ಥೆಗಳಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮೂಲಕ ಯೋಗ ಶಿಕ್ಷಣ ಒದಗಿಸಲಾಗುತ್ತಿದೆ. ಪ್ರತಿ ವರ್ಷ ಶೈಕ್ಷಣಿಕ ಚಟುವಟಿಕೆಗಳ ಆರಂಭದ ದಿನಗಳಲ್ಲಿ ಮೂಲಭೂತ ಯೋಗ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಕಾರ್ಯವನ್ನು ಅಂಬಿಕಾ ಸಂಸ್ಥೆಗಳು ಮಾಡಿಕೊಂಡು ಬರುತ್ತಿವೆ. ಅಲ್ಲದೆ ಪ್ರತಿನಿತ್ಯ ತರಗತಿ ಆರಂಭಕ್ಕೂ ಮುನ್ನ ನಿಗದಿತ ಸಮಯದ ಯೋಗಾಭ್ಯಾಸವನ್ನು ನಡೆಸಲಾಗುತ್ತಿದೆ. ಪಠ್ಯಕ್ರಮದಲ್ಲಿ ಯೋಗವನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ಸಂಸ್ಥೆಯಾಗಿ ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆಗಳು ಹೊರಹೊಮ್ಮಿದೆ. ಇದೀಗ ಆರ್ಟ್ ಆಫ್ ಲಿವಿಂಗ್ ಹಾಗೂ ಅಂಬಿಕಾ ಸಂಸ್ಥೆಗಳ ನಡುವೆ ಅಧಿಕೃತ ಒಪ್ಪಂದ ನಡೆದಿದ್ದು, ಮುಂದಿನ ದಿನಗಳಲ್ಲಿ ಅಂಬಿಕಾ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಯೋಗಾಭ್ಯಾಸ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.