ಕುಮಟಾ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2024 ಕರ್ನಾಟಕ ರಾಜ್ಯ ಪತ್ರಿಕೆಯನ್ನು ಹೊರಡಿಸಿದ್ದು, 25 ನೇ ಕಲಂನಲ್ಲಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಅನ್ಯ ಸಮುದಾಯದವರನ್ನು ನೇಮಕ ಮಾಡುವ ಕುರಿತು ತಿದ್ದುಪಡಿ ಮಾಡಿದ್ದು ಅತ್ಯಂತ ಖಂಡನೀಯವಾಗಿದೆ. ಇದು ದೇವಸ್ಥಾನಗಳಲ್ಲಿ ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರನ್ನು ಸೇರಿಸಿ ದೇವಸ್ಥಾನಗಳ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಕರ್ನಾಟಕ ಸರಕಾರವು 16 ನೇ ವಿಧಾನಸಭೆಯ 3 ನೇ ಅಧಿವೇಶನದಲ್ಲಿ ಈ ಕುರಿತು ಪತ್ರಿಕೆಯನ್ನು ಹೊರಡಿಸಿದ್ದು, ಹಿಂದೂ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅನ್ಯ ಸಮುದಾಯದವರನ್ನು ನೇಮಕ ಮಾಡುವ ಮೂಲಕ ಮುಸಲ್ಮಾನರ ಪರವಾಗಿರುವ ರಾಜ್ಯ ಸರಕಾರ ಹಿಂದೂಗಳನ್ನು ವಕ್ಸ್ ಬೋರ್ಡಗೆ ನೇಮಕ ಮಾಡಬಹುದೇ? ಎಂದು ಪ್ರಶ್ನಿಸಿದ್ದು, ಕೂಡಲೇ ರಾಜ್ಯ ಸರಕಾರವು ಈ ತಿದ್ದುಪಡಿಯನ್ನು ರದ್ದು ಮಾಡಬೇಕು ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯ ಮಾತುಗಳು ಭಕ್ತ ಸಮುದಾಯದಿಂದ ವ್ಯಕ್ತವಾಗಿದೆ.
ದೇವಸ್ಥಾನಗಳನ್ನು ಭಕ್ತರೇ ನಡೆಸಬೇಕು: – ಶ್ರೀ ಪ. ಪೂ. ವಾಮನಾಶ್ರಮ ಮಹಾಸ್ವಾಮೀಜಿಗಳು
ಈ ಕುರಿತು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಕುಮಟಾದ ಶ್ರೀ ಮಹಾಲಸಾ ನಾರಾಯಣಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಉತ್ತರ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಹಳದೀಪುರ ಶ್ರೀಸಂನ್ಯಾಸ ಶಾಂತಾಶ್ರಮದ ಮಠಾಧಿಪತಿ ಶ್ರೀ ಪರಮ ಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿಗಳು ಮಾತನಾಡಿ, ಸ್ವಾತಂತ್ರ್ಯದ ನಂತರ ನಾವು ಯಾವುದೇ ಭಯವಿಲ್ಲದೇ ಸುಖ ಶಾಂತಿಯಿಂದ ಬಾಳಬಹುದು ಎಂಬ ವಿಚಾರ ಜನತೆಯ ಮನದಲ್ಲಿತ್ತು. ಸದ್ಯದ ಸ್ಥಿತಿ ಆ ರೀತಿ ಇಲ್ಲ. ನಮ್ಮ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಈಗ ದೇವಸ್ಥಾನದ ಮಹತ್ವವನ್ನು ಎಲ್ಲರಿಗೆ ತಿಳಿಸುವ ಅವಶ್ಯಕತೆಯಿದೆ. ಈ ಕಾರ್ಯ ಸ್ವಾತಂತ್ರ್ಯ ಬಂದ ಕೂಡಲೇ ಆಗಬೇಕಿತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ, ದೇವಸ್ಥಾನಗಳನ್ನು ಭಕ್ತರೇ ನಡೆಸುವಂತಾಗಬೇಕು. ಇಂದಿನಿಂದ ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ನಮ್ಮ ಎಲ್ಲಾ ಶ್ರದ್ಧಾಸ್ಥಾನಗಳು ಸರಕಾರದ ಹಿಡಿತದಿಂದ ಮುಕ್ತಗೊಳ್ಳಲಿವೆ. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ ಮಹಾಸಂಘವು ಮಾಡುತ್ತಿರುವ ಕಾರ್ಯ ಶ್ಲಾಘನೀಯ, ಅತೀಶೀಘ್ರದಲ್ಲಿ ಈ ಕಾರ್ಯಕ್ಕೆ ಸಂಪೂರ್ಣ ಜಯ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನುಡಿದಿದ್ದಾರೆ.