ಪುತ್ತೂರು: ಸಂತಾನ ಭಾಗ್ಯ ಸಹಿತ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯಾಗಿ ಗೋಚರಿಸಿದ ಬನ್ನೂರು ಗ್ರಾಮದ ದೈಯರ ಮಾಡ ನಡಿಮಾರು ಮತ್ತು ಆನೆಮಜಲು ನ್ಯಾಯಾಲಯದ ಸಂಕೀರ್ಣದಲ್ಲಿರುವ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಕುಂಟಾರು ವಾಸುದೇವ ತಂತ್ರಿಯವರ ವೈದಿಕತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ನಡೆಯಿತು.
ಗುರುವಾರ ಬೆಳಿಗ್ಗೆ ಗಣಪತಿ ಹವನ, ಬಾವುದ ಕೆರೆಯ ಬಳಿ ನಾಗತಂಬಿಲ, ದೈಯ್ಯೆರೆ ಮಾಡದಲ್ಲಿ ಬ್ರಹ್ಮಕಲಶಪೂಜೆ ಬಳಿಕ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಬೆಳಿಗ್ಗೆ ಬನ್ನೂರು ಶ್ರೀ ಶಿವಪಾರ್ವತಿ ಮಂದಿರ, ನವೋದಯ ಮಹಿಳಾ ಮಂಡಳಿ ಬನ್ನೂರು, ಬೊಳುವಾರು ವೈದೇಹಿ ಭಜನಾ ಮಂಡಳಿ, ಕುಂಟ್ಯಾನ ಬ್ರಾಹ್ಮರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಸಂದರ್ಭದಲ್ಲಿ ಹರಿದಾಸ ಶ್ರೀ ಮಂಡ್ಯ ಮಧುಸೂಧನ್ ತಂಡದಿಂದ ಹರಿಕಥಾ ಕಾಲಕ್ಷೇಪ’ ಗಿರಿಜಾ ಕಲ್ಯಾಣ’ ನಡೆಯಿತು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಅಯೋಧ್ಯಾನಗರ, ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಚಿ ರಮೇಶ್ ಗೌಡ ನೀರ್ಪಾಜೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎ. ವಿ. ನಾರಾಯಣ, ಪ್ರಧಾನ ಕಾರ್ಯದರ್ಶಿ ಮೌನೀಶ್ ಎನ್., ಖಜಾಂಚಿ ಸತೀಶ್ ಕುಮಾರ್, ಸರ್ವ ಸದಸ್ಯರು, ಬನ್ನೂರು ಗ್ರಾಮಸ್ಥರು ಉಪಸ್ಥಿತರಿದ್ದರು.