ಪುತ್ತೂರು: ಮಾಹಿತಿ ಎಲ್ಲಿಂದ, ಯಾವ ಮೂಲದಿಂದ ಹಂಚುತ್ತೇವೆ ಎನ್ನುವುದನ್ನು ತಿಳಿಯುವುದು ಮುಖ್ಯ. ಅಕ್ಷರ ದೋಷಗಳ ತಿದ್ದುಪಡಿ ಮಾಡುವುದು, ಸರಳಭಾಷೆಯಲ್ಲಿ ವಿಷಯವನ್ನು ತಲುಪಿಸುವ ಕೆಲಸ ಎಂದು ಆಧುನಿಕ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಲು ಸಹಾಯಕವಾಗಿದೆ ಎಂದು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಪಕಿ ದುರ್ಗಾ ಪ್ರಸನ್ನ ಹೇಳಿದರು.
ಅವರು ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಐ ಕ್ಯೂ ಎ ಸಿ ಇದರ ಆಶ್ರಯದಲ್ಲಿ ನಡೆದ ವಿಕಿಪೀಡಿಯ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿಕಿಪೀಡಿಯ ಜ್ಞಾನ ಪಡೆಯುವುದರ ಜೊತೆಗೆ ಜ್ಞಾನವನ್ನು ಹಂಚುವ ಕಾರ್ಯ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಿರುವುದರಿಂದ ಪ್ರತಿಯೊಬ್ಬರಿಗೂ ಅರ್ಥಮಾಡಿಕೊಳ್ಳಬಹುದಾದ ಸುಲಭ ಮಾರ್ಗವಾಗಿದೆ ಎಂದರು.
ಕಾಲೇಜಿನ ಪರೀಕ್ಷಾಂಗ ಕುಲಸಚಿವ, ನಿರ್ದೇಶಕ ಡಾ. ಶ್ರೀಧರ್ ಎಚ್. ಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಇದರ ಬಳಕೆ ಇರಲಿಲ್ಲ ಹೀಗಾಗಿ ಸಾಕಷ್ಟು ಸವಾಲು ಎದುರಿಸಬೇಕಾಯಿತು. ಆದರೆ ಎಲ್ಲಿ ತಂತ್ರಜ್ಞಾನದ ಯುಗ ಆರಂಭವಾಯಿತೋ ಬೆರಳ ತುದಿಯಲ್ಲಿಯೇ ಮಾಹಿತಿಗಳನ್ನು ಕಲೆ ಹಾಕಲು ಸರಳ ಮಾರ್ಗ ಸಿಕ್ಕಂತಾಗಿದೆ. ಮಾಹಿತಿಗಳು ಎಷ್ಟು ನಿಜ, ಎಷ್ಟು ಸುಳ್ಳು ಎನ್ನುವುದನ್ನು ಪರಿಶೀಲಿಸಿ ನೋಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಜಯ ಸರಸ್ವತಿ ಉಪಸ್ಥಿತರಿದ್ದರು.
ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಕ್ಷಯ್ ರೈ ಸ್ವಾಗತಿಸಿ, ಸುತನ್ ಕೇವಳ ವಂದಿಸಿದರು. ವಿದ್ಯಾರ್ಥಿ ಹರಿಪ್ರಸಾದ್ ನಿರೂಪಿಸಿದರು.