ಪುತ್ತೂರು: ನಗರದ ಹೊರವಲಯದ ಪರ್ಲಡ್ಕದಲ್ಲಿರುವ ಕಾರ್ಯಾಚರಿಸುತ್ತಿರುವ ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ಅರ್ಪಿಸುವ ಸಾಂಸ್ಕೃತಿಕ ಕಲಾ ಸಂಭ್ರಮ ‘ಕಲೋಪಾಸನಾ-2024’ ಫೆ.24, 25 ಹಾಗೂ 26 ರಂದು ಮೂರು ದಿನಗಳ ಕಾಲ ಸಂಜೆ ಹೊತ್ತಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾರಸಿಕರ ಮನ ಸೆಳೆಯಲಿದೆ ಎಂದು ಎಸ್‍ಡಿಪಿ ರೆಮಿಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ 20ನೇ ವರ್ಷದ ಸಾಂಸ್ಕೃತಿಕ ಕಲಾ ಸಂಭ್ರಮ ಇದಾಗಿದ್ದು, ಕಳೆದ 19 ವರ್ಷಗಳಲ್ಲಿ ನಿರಂತರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸಂಗೀತ ಹಾಗೂ ಭರತನಾಟ್ಯ ಕಲಾವಿದರನ್ನು ಪುತ್ತೂರಿಗೆ ಪರಿಚಯಿಸುವ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಫೆ.24 ಶನಿವಾರ ಸಂಜೆ 6 ಗಂಟೆಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಡಾ.ಸಿ.ಕೆ. ಬಲ್ಲಾಳ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ಥಾನಿ ಸಂಗೀತ ಜುಗಲ್ ಬಂದಿ ನಡೆಯಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ ಅವರ ಹಾಡುಗಾರಿಕೆಗೆ ವಯಲಿನ್ ನಲ್ಲಿ ವಿದ್ವಾನ್ ಬಿ.ಅನಂತಕೃಷ್ಣ ಚೆನ್ನೈ ಹಾಗೂ ಮೃದಂಗದಲ್ಲಿ ವಿದ್ವಾನ್ ಕೆ.ಯು.ಜಯಚಂದ್ರ ರಾವ್ ಬೆಂಗಳೂರು ಸಾಥ್ ನೀಡಲಿದ್ದಾರೆ. ಹಿಂದೂಸ್ಥಾನಿ ಸಂಗೀತದಲ್ಲಿ ಪಂಡಿತ್ ಜಯತೀರ್ಥ ಮೇವುಂಡಿ ಬೆಂಗಳೂರು ಅವರ ಹಾಡುಗಾರಿಕೆಗೆ ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ, ತಬಲದಲ್ಲಿ ಯಶವಂತ ವೈಷ್ಣವ್ ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.
ಫೆ.25 ಭಾನುವಾರ ಸಂಜೆ 6.30 ಕ್ಕೆ ಭರತಾಂಜಲಿ ನೃತ್ಯ ಸಂಸ್ಥೆ ವತಿಯಿಂದ ಅನಿತಾ ಗುಹಾ ಚೆನ್ನೈ ನಿರ್ದೇಶನದಲ್ಲಿ ‘ಹರೇ ರಾಮ ಹರೇ ಕೃಷ್ಣಾ’ ಭರತ ನೃತ್ಯಗಾಥಾ ಪ್ರದರ್ಶನಗೊಳ್ಳಲಿದೆ. ಫೆ.26 ಸೋಮವಾರ ಸಂಜೆ 6.30 ಕ್ಕೆ ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ‘ಇಂದ್ರಪ್ರಸ್ಥ’ ಪ್ರದರ್ಶನಗೊಳ್ಳಲಿದೆ. ಮೂರು ದಿನಗಳ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ರೂಪಲೇಖಾ ಉಪಸ್ಥಿತರಿದ್ದರು.