ಶಾಲೆ ಹೊರತು ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು | 159 ವರ್ಷಗಳ ಇತಿಹಾಸ ಹೊಂದಿರುವ ನೆಲ್ಲಿಕಟ್ಟೆ ಶಾಲಾ ಎಸ್‍.ಡಿ.ಎಂ.ಸಿ, ಪೋಷಕರಿಂದ ಆಗ್ರಹ

ಪುತ್ತೂರು: ಸುಮಾರು 159 ವರ್ಷಗಳ ಇತಿಹಾಸವಿರುವ ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಕಟ್ಟಡವಲ್ಲದೆ ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ಶಾಲಾ ಎಸ್‍. ಡಿ.ಎಂ.ಸಿ, ಮಕ್ಕಳ ಪೋಷಕರು ಹಾಗೂ ಸ್ಥಳೀಯರು ಬುಧವಾರ ಸಭೆ ಸೇರಿ ಆಗ್ರಹಿಸಿದರು.

ಈ ಶಾಲಾ ಆವರಣದಲ್ಲಿ ಬೇರೆ ಸರಕಾರಿ ಕಟ್ಟಡ ನಿರ್ಮಾಣಕ್ಕೆ ಹುನ್ನಾರ ನಡೆಯುತ್ತಿದ್ದು, ಈ ನೆಪವಿಟ್ಟುಕೊಂಡು ರಾತ್ರಿ ಶಾಲಾ ಆವರಣದಲ್ಲಿ ತಡರಾತ್ರಿ ವರೆಗೂ ಬೇರೆ ಬೇರೆ ಚಟುವಟಿಕೆಗಳು ನಡೆಸಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದರ ಜತೆಗೆ ಶಾಲಾ ಕಟ್ಟಡ ಹೊರತುಪಡಿಸಿ ಬೇರೆ ಯಾವುದೇ ಕಟ್ಟಡ ನಿರ್ಮಿಸಬಾರದು ಎಂಬುದು ಶಾಲಾ ಎಸ್‍.ಡಿ.ಎಂ.ಸಿ, ಪೋಷಕರು ಹಾಗೂ ಸ್ಥಳೀಯ ನೆಲ್ಲಿಕಟ್ಟೆ ಮಿತ್ರಮಂಡಲದ ಆಗ್ರಹಿಸಿದರು.

ಸಭೆಯಲ್ಲಿ ಆ ಭಾಗದ ನಗರಸಭೆ ಸದಸ್ಯ ರಮೇಶ್ ರೈ ಮಾತನಾಡಿ, ಸುಮಾರು 159 ವರ್ಷಗಳ ಇತಿಹಾಸವಿರುವ ಈ ಶಾಲೆ ಅದೆಷ್ಟೋ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದೆ. ಪ್ರಸ್ತುತ 89 ವಿದ್ಯಾರ್ಥಿಗಳು ಅದರಲ್ಲೂ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯಲ್ಲಿ ಸರಿಯಾದ ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲ. ಮುಖ್ಯವಾಗಿ ಧ್ವಜಸ್ತಂಭ ಇಲ್ಲದ ಶಾಲೆಯಾಗಿದೆ. ಒಟ್ಟಾರೆ ಮೂಲಭೂತ ಸೌಕರ್ಯಗಳಿಲ್ಲ. ಅದರ ವ್ಯವಸ್ಥೆ ಮಾಡುವುದನ್ನು ಬಿಟ್ಟು ಬೇರೆ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಆಡಳಿತ ಹೊರಟಿದೆ. ಯಾವುದೇ ಕಾರಣಕ್ಕೆ ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು. ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.































 
 

ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್‍ ಬನ್ನೂರು ಮಾತನಾಡಿ, ಎಷ್ಟೋ ವರ್ಷಗಳ ಹಿಂದಿನಿಂದಲೂ ನೆಲ್ಲಿಕಟ್ಟೆ ಶಾಲೆ ಹೆಸರುವಾಸಿಯಾಗಿದೆ. ಈ ಆವರಣದಲ್ಲಿ ಶಾಲೆಯನ್ನು ಬಿಟ್ಟು ಬೇರೆ ಯಾವುದೇ ಕಟ್ಟಡಕ್ಕೆ ಅವಕಾಶ ನೀಡಬಾರದು. ಅಲ್ಲದೆ ರಾತ್ರಿವೇಳೆಯಲ್ಲಿ ಯಾವುದೇ ವಾಹನಗಳಿಗೆ, ಇನ್ನಿತರರಿಗೆ ಅಕ್ರಮ ಪ್ರವೇಶಕ್ಕೆ ಅವಕಾಶ ನೀಡಬಾರದು. ಈ ಕುರಿತು ಶಾಸಕರು ಸಹಿತ ಸಂಬಂಧ ಪಟ್ಟ ಇಲಾಖೆಗೆ ಆಕ್ಷೇಪಣಾ ಮನವಿ ನೀಡಿದ್ದೇವೆ. ಆದರೆ ಈ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಇದೀಗ ವಿಕಲಚೇತನರಿಗೆ ಕಟ್ಟಡವೊಂದು ನಿರ್ಮಾಣವಾಗುತ್ತಿದೆ. ಆದ್ದರಿಂದ ನಾವು ತೋರಿಸಿದ ಜಾಗದಲ್ಲಿ ಬೇರೆ ಕಟ್ಟಡಗಳನ್ನು ಕಟ್ಟಲಿ. ಅದನ್ನು ಬಿಟ್ಟು ಸಂಬಂಧ ಪಟ್ಟವರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಶಾಲಾ ಎಸ್‍.ಡಿ.ಎಂ.ಸಿ, ಮಕ್ಕಳ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕೆಲಸ ಕಾರ್ಯ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ರಾತ್ರಿ ಹೊತ್ತು ಅಕ್ರಮ ಪ್ರವೇಶ ಮಾಡುವವರ ವಿರುದ್ಧ ಪೊಲೀಸರಿಗೆ ದೂರು ನೀಡಿ ಎಂದು ತಿಳಿಸಿದರು.

ಸಭೆಯಲ್ಲಿ ಎಸ್‍.ಡಿ.ಎಂ.ಸಿ.ಯ ನೆಲ್ಲಿಕಟ್ಟೆ ಮಿತ್ರಮಂಡಲದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಹಳೆ ವಿದ್ಯಾರ್ಥಿ, ಮಿತ್ರಮಂಡಲದ ಕಾರ್ಯದರ್ಶಿ ರೋಹಿತ್ ಕುಮಾರ್, ಪೋಷಕರಾದ ಶೇಖರ ಬ್ರಹ್ಮನಗರ, ಹರೀಶ್ ಬ್ರಹ್ಮನಗರ, ಸ್ಥಳೀಯರಾದ ಗೌತಮ್ ರಾವ್, ನಗರ ಕಾಂಗ್ರೆಸ್ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮಿತ್ರಮಂಡಲದ ಶಶಿಕುಮಾರ್, ವರ್ತಕರ ಸಂಘದ ಉಲ್ಲಾಸ ಪೈ, ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top