ಪುತ್ತೂರು: ಕಷ್ಟ ಜೀವನ ಅನುಭವಿಸಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಸರ್ವಜ್ಞರ ತತ್ವ ಆದರ್ಶಗಳು ನಮಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ, ಮೋಸದ ಜಾಲವನ್ನು ಬೇಧಿಸುವ ಚಾಕಚಕ್ಯತೆಯನ್ನು ಶಿವಾಜಿ ತೋರಿಸಿಕೊಟ್ಟಿದ್ದಾರೆ. ಶ್ರೀಮಂತಿಕೆಯಿಂದ ಎಲ್ಲವನ್ನೂ ಪಡೆಯಲು ಆಗದಿದ್ದರೂ, ಶ್ರಮದ ಸಾಧನೆಯಿಂದ ಸಕಲವನ್ನು ಪಡೆಯಬಹುದು ಎಂದು ಪುತ್ತೂರು ತಹಸೀಲ್ದಾರ ಪುರಂದರ ಹೆಗ್ಡೆ ಹೇಳಿದರು.
ಅವರು ಮಂಗಳವಾರ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮತ್ತು ಸಂತಕವಿ ಸರ್ವಜ್ಞ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂತ ಫಿಲೋಮಿನಾ ಕಾಲೇಜು ಉಪನ್ಯಾಸಕ ಡಾ. ಚಂದ್ರಶೇಖರ್ ಉಪನ್ಯಾಸ ನೀಡಿ, ಕಷ್ಟ ಕಾಲದಲ್ಲಿ ಸಮಾಜವನ್ನು ಸುತ್ತಿ ಸ್ಥಿತಿಗತಿಯನ್ನು ಸರ್ವಜ್ಞರು ತೋರಿಸಿದ್ದಾರೆ. ಜಾತಿ ವ್ಯವಸ್ಥೆಯ ಬಗ್ಗೆ ಸರ್ವಜ್ಞರು ತ್ರಿಪದಿಯ ಮೂಲಕ ತಿಳಿಸುವ ಕಾರ್ಯ ಮಾಡಿದ್ದಾರೆ. ಪ್ರತಿಭೆಗಳು ಸಮಾಜದ ಯಾವ ಜಾತಿಯಲ್ಲಿ ಬೇಕಾದರೂ ಹುಟ್ಟಿ ಬರಲು ಸಾಧ್ಯವಿದ್ದು, ಅವಕಾಶಗಳು ಸಿಗಬೇಕಾಗಿದೆ. ದೇಶೀಯ ವ್ಯವಸ್ಥೆಯನ್ನು ತರುವ ನಿಟ್ಟಿನಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ ಎಂದ ಅವರು, ಭಾರತದ ಜ್ಞಾನ ವಿಶ್ವಕ್ಕೆ ಇತಿಹಾಸದ ದಿನಗಳಿಂದಲೂ ಪಸರಿಸಿಕೊಂಡು ಬರಲಾಗಿದೆ. ಮಹಾನ್ ವ್ಯಕ್ತಿಗಳ ಜೀವನ ನಡವಳಿಕೆ ನಮಗೆ ಆದರ್ಶವಾಗಿದ್ದು, ಇದನ್ನು ಅನುಸರಿಸುವ ಕಾರ್ಯ ನಡೆಯಬೇಕು. ಮೊಬೈಲ್ ನಿಂದಾಗಿ ಪುಸ್ತಕ ಓದುಗರ ಕಡಿಮೆಯಾಗುತ್ತಿದೆ. ಇನ್ನೊಬ್ಬರ ಏಳಿಗೆಯನ್ನು ಗಮನಿಸುವುದು ಬಿಟ್ಟು ನಮ್ಮ ಸಾಧನೆಯನ್ನು ನೋಡುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್, ಕುಂಬಾರರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಕಛೇರಿಯ ದಯಾನಂದ ಸ್ವಾಗತಿಸಿದರು. ಉಪತಹಸೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.