ಸಾಲ ಮನ್ನಾ ಮೊತ್ತ ಒಂದು ತಿಂಗಳೊಳಗೆ ನೀಡಬೇಕು | ಸಾಲಮನ್ನಾ ವಂಚಿತ ರೈತರ ಪ್ರತಿಭಟನೆಯಲ್ಲಿ ಕಿಶೋರ್ ಶಿರಾಡಿ ಎಚ್ಚರಿಕೆ

ಪುತ್ತೂರು: ರೈತರ ಸಾಲ ಮನ್ನಾ ಮೊತ್ತ ಪಾವತಿಯಾಗದಿದ್ದರೆ ಡಿಸಿಸಿ ಬ್ಯಾಂಕ್ ಚಲೋ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದ್ದಾರೆ.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಇಲ್ಲಿಯ ಅಮರ್ ಜವಾನ್ ಸ್ಮಾರಕದ ಬಳಿ ಮಂಗಳವಾರ ನಡೆದ ಸಾಲ ಮನ್ನಾ ವಂಚಿತ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಾಲ ಮನ್ನಾ ಮೊತ್ತ ರೈತರಿಗೆ ಪಾವತಿಯಾಗದಿರಲು ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆ. ಇದರ ಕುರಿತು ಸಾಲಗಾರರ ಸಾಲದ ನಂಬರ್ ಸಹಿತ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ಸಂಬಂಧಪಟ್ಟ ಇಲಾಖೆಗೆ ಬರೆದು ಕಾರಣವನ್ನು ಲಿಖಿತವಾಗಿ ನೀಡಬೇಕು. ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೂ ಮನವಿ ಸಲ್ಲಿಸಿ ನಿಗದಿತ ಗಡುವು ನೀಡಲಾಗುವುದು ಎಂದ ಅವರು, 2018 ರಲ್ಲಿ ಜಾರಿಯಾದ ಸಾಲ ಮನ್ನಾ ಯೋಜನೆಯಲ್ಲಿ ದ.ಕ ಜಿಲ್ಲೆಯ ಶೇ.40 ರೈತರಿಗೆ ದೊರೆತಿದೆ. ನಂತರ ಸಹಕಾರಿ ಇಲಾಖೆ ಅಧಿಕಾರಿಗಳು ರೈತರನ್ನು ವಂಚಿಸುತ್ತಾ ಬಂದಿದ್ದಾರೆ.  ರೈತರ ಸಮಸ್ಯೆ ಅಳಲನ್ನು ಯಾರೂ ಕೇಳಿಲ್ಲ. ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದ ರೈತರಿಗೆ ಸವಲತ್ತು ತಲುಪದಂತಾಗಿದೆ. ಯಾವುದೇ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಕಚೇರಿಗೆ ಬಂದು ಬೇಡಿಕೆ ಕೇಳಿದರೂ ರೈತರಿಗೆ ಸರಿಯಾದ ಮಾಹಿತಿ ನಿಡದೇ ಸತಾಯಿಸಿ ನಿರಂತರ ದೌರ್ಜನ್ಯವಾಗುತ್ತಿದೆ. ಲಕ್ಷಾಂತರ ರೈತರಿಗೆ ಸೇರಬೇಕಾದ ಲಕ್ಷಾಂತರ ಮೊತ್ತವನ್ನು ಯಾವುದೋ ಬ್ಯಾಂಕ್‌ನಲ್ಲಿ ಠೇವಣಿಯಿಟ್ಟು ರೈತರಿಗೆ ದೊರೆಯದಂತೆ ಅಧಿಕಾರಿಗಳು ಮಾಡುತ್ತಿದ್ದಾರೆ. ಲಂಚ ಕೊಡದೇ ರೈತರಿಗೆ ಯಾವುದೇ ಸವಲತ್ತು ಸಿಗದ ಪರಿಸ್ಥಿತಿಯಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ರಂಗ ಇಲ್ಲದೇ ಇರುತ್ತಿದ್ದರೆ ರೈತರಿಗೆ ಯಾವುದೇ ಸವಲತ್ತು ದೊರೆಯುತ್ತಿರಲಿಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿತ್ತು ಎಂದು ಆರೋಪಿಸಿದ ಅವರು, ಸಾಲ ಮನ್ನಾದ ಮೊತ್ತವನ್ನು ಒಂದು ತಿಂಗಳೊಳಗೆ ಯಾವುದೇ ಅಲೆದಾಟ ಮಾಡಿಸದೇ ತಕ್ಷಣ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು.































 
 

ಕಳಂಜ ಬಾಳಿಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮಾತನಾಡಿ, ಅಧಿಕಾರಿಗಳ ಎಡವಟ್ಟು ಹಾಗೂ ಅವರು ನೀಡುವ ವಿವಿಧ ನೆಪಗಳಿಂದಾಗಿ ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದಾರೆ. ಸರಕಾರದಿಂದ ನ್ಯಾಯೋಚಿತವಾಗಿ ದೊರೆಯಬೇಕಾದ ಸೌಲಭ್ಯದಿಂದ ರೈತರಿಗೆ ದೊರೆಯುತ್ತಿಲ್ಲ. ಹೆಸರಿಗಷ್ಟೇ ಗ್ರೀನ್ ಲಿಸ್ಟ್‌ನಲ್ಲಿದೆ. ಸಾಲದ ಸುಳಿ, ಧಾರಣೆಯ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದರೂ ಅವರಿಗೆ ಪ್ರಜೆಗಳು ಮುಖ್ಯವಾಗಿಲ್ಲ ಎಂದು ಹೇಳಿದ ಅವರು ರೈತರ ತಾಳ್ಮೆ ಪರೀಕ್ಷಿಸುವುದು ಬೇಡ ಎಂದು ಹೇಳಿದರು.

ಪ್ರತಿಭಟನಾ ಸಭೆಯ ಬಳಿಕ ಸಹಾಯಕ ಆಯುಕ್ತರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದರು. ಸಾಲಮನ್ನಾ ಹೋರಾಟ ಸಮಿತಿ ಸಂಚಾಲಕ ಜಯಪ್ರಕಾಶ ಕೂಜುಗೋಡು, ಸಾಲಮನ್ನಾ ವಂಚಿತ ರೈತರಾದ ಶಂಕರ ನಾರಾಯಣ ಕೆ., ಈಶ್ವರ ಕೆ., ನರೇಂದ್ರ ಕೂಜುಗೋಡು, ಮೋಹನ ಕೆದಿಲ, ರಮೇಶ ಕೋನಡ್ಕ, ರಾಮಚಂದ್ರ ಭಟ್ ಕಾಯರ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top