ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಖ್ಯಾತ ಕಾದಂಬರಿಕಾರ ಕೆ. ಟಿ. ಗಟ್ಟಿ ನಿಧನ

ಮಂಗಳೂರು: ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ, ಹಿರಿಯ ಸಾಹಿತಿ  ಕೆ. ಟಿ. ಗಟ್ಟಿ (86) ನಿಧನ ರಾಗಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಅದರಲ್ಲೂ ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು. ಅವರು ಮೂಲತಃ ಕಾಸರಗೋಡಿನ ಕೂಡ್ಲುವಿನಲ್ಲಿ 1938 ರಲ್ಲಿ ಜನಿಸಿದ್ದರು.

1957 ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ವೃತ್ತಿಯಲ್ಲಿ ಕೃಷಿಕರಾದರೂ ಯಕ್ಷಗಾನ ಪ್ರಿಯರಾದ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಳಿಯೊಡನೆ ಊರೂರು ಸುತ್ತುತ್ತಿದ್ದು, ಸಿಕ್ಕಿದ ಪುಸ್ತಕಗಳನ್ನು ಮನೆಗೆ ತಂದಿಡುತ್ತಿದ್ದುದು ಗಟ್ಟಿಯವರಿಗೆ ಓದಲು ಪ್ರಚೋದನೆ ನೀಡಿತು. ತಾಯಿ ಪರಮೇಶ್ವರಿಯವರು ಮನೆಯಲ್ಲಿ ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳು ಸಾಹಿತ್ಯದಲ್ಲಿ ಮತ್ತಷ್ಟು ಆಸಕ್ತಿ ಬೆಳೆಯುವಂತೆ ಮಾಡಿದ್ದವು.



































 
 

ಕೆ. ಟಿ. ಗಟ್ಟಿಯವರು ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕ್ರಮಬದ್ಧವಾಗಿ ಕಲಿತದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳುವಳಿಯಲ್ಲಿ ಭಾಗಿಯಾದರು . ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಕೇರಳ ವಿಶ್ವವಿದ್ಯಾನಿಲಯದಿಂದ ಪಡೆದರು. ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದದ್ದು ಮಾಯಿಪ್ಪಾಡಿಯ ಸರಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಿಂದ. ತಲಚೇರಿಯ ಸರಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್‌. ಪದವಿ ಪಡೆದ ಗಟ್ಟಿಯವರು ಶಿಕ್ಷಕರಾಗಿ ಸೇರಿದ್ದು ಕಾಸರಗೋಡಿನ ಸರಕಾರಿ ಪ್ರೌಢಶಾಲೆಯಲ್ಲಿ. ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕುಳಿತು ಕೇರಳ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದರು. 1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆ ಸೇರಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರ ಜೊತೆಗೆ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್ಫರ್ಡಿನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಡಿಪ್ಲೊಮ ಪಡೆದರು.

ಕೆಲಕಾಲ ಇಥಿಯೋಪಿಯಾದಲ್ಲಿದ್ದು 1982 ರಲ್ಲಿ ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡಿದ್ದರು.

ಅವರು ಹಲವಾರು ಕಥೆಗಳು ಕಾದಂಬರಿಗಳು, ವೈಚಾರಿಕ ಬರಹಗಳು, ಕವಿತೆಗಳು, ನಾಟಕಗಳು, ಅಧ್ಯಯನ ಪೂರಕ ಬರಹಗಳನ್ನು ರಚಿಸಿದ್ದಾರೆ.

ಸಾಹಿತ್ಯ ಕ್ಷೇತ್ರದ ಗಣನೀಯ ಸೇವೆಗಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ‘ಸಂದೇಶ’ ವರ್ಷದ ಲೇಖಕ ಪ್ರಶಸ್ತಿ, ಸಾಹಿತ್ಯ ಸವ್ಯಸಾಚಿ -2011, ಗೌರವ, ನಾಟಕಗಳಿಗಾಗಿ ಚದುರಂಗ ಪ್ರಶಸ್ತಿ ಮತ್ತು ಸಮತಂತೋ ಪ್ರಶಸ್ತಿಗಳಲ್ಲದೆ ದ.ಕ. ಜಿಲ್ಲಾ 10ನೆಯ ಸಾಹಿತ್ಯ ಸಮ್ಮೇಳನ ಮತ್ತು ಕಾಸರಗೊಡು ಜಿಲ್ಲಾ 2ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಕ್ಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top