ಪುತ್ತೂರು; ಪುತ್ತೂರು ತಾಲೂಕು ವಾಣಿಜ್ಯ ಸಂಕೀರ್ಣದಲ್ಲಿ ಒಂದು ಅಂಗಡಿಕೋಣೆ ಯನ್ನು ಏಲಂ ಪ್ರಕ್ರಿಯೆ ಮೂಲಕ ನನ್ನ ಪತ್ನಿ ಹೇಮಲತಾ ಹೆಸರಲ್ಲಿ ಪಡೆದುಕೊಂಡಿದ್ದು, ಕಳೆದ 13 ತಿಂಗಳಿನಿಂದ ಬಾಡಿಗೆ ಪಾವತಿಸಲು ತೊಂದರೆ ಉಂಟಾಗಿದೆ. ನನಗೆ 6 ತಿಂಗಳು ಸಮಯವಕಾಶ ಕೇಳಿ ಜಿಲ್ಲಾ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೇನೆ. ಆದರೂ ಪುತ್ತೂರು ತಾಲೂಕು ಪಂಚಾಯತ್ ನನ್ನ ಕುಟುಂಬಕ್ಕೆ ಸೇರಿದ ಅಂಗಡಿಕೋಣೆಯನ್ನು ಬಹಿರಂಗ ಏಲಂ ಮಾಡಲಾಗಿದೆ. ಈ ಅಂಗಡಿ ಕೋಣೆಯಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ನನ್ನ ವಸ್ತುಗಳನ್ನೂ ಏಲಂ ಮಾಡಲಾಗಿದೆ ಎಂದು ರಾಜ್ ಬಪ್ಪಳಿಗೆ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಅಂಗಡಿ ಕೋಣೆಯನ್ನು ಪಡೆದುಕೊಳ್ಳುವಾಗ ಒಂದು ಲಕ್ಷ ರೂ.ಡೆಪಾಸಿಟ್ ಮಾಡಲಾಗಿದೆ. 72 ಸಾವಿರ ಬಾಡಿಗೆ ಬಾಕಿಯಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ತಾಪಂ ಕಾರ್ಯನಿರ್ವಹಣಾಧಿಕಾರಿ ಈ ಅಂಗಡಿಕೋಣೆಯನ್ನು ಏಲಂ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ರಾಜ್ ಬಪ್ಪಳಿಗೆ ಆರೋಪಿಸಿದ್ದಾರೆ.
2020 ಜುಲೈ ತಿಂಗಳಿನಿಂದ ಬಾಡಿಗೆದಾರರಾಗಿರುವ ಹೇಮಲತಾ ಅವರು ಬಾಡಿಗೆ ಪಾವತಿ ಮಾಡಿಲ್ಲ. ಪ್ರತೀ ತಿಂಗಳು 10 ತಾರೀಕಿನ ಒಳಗೆ ಬಾಡಿಗೆ ಪಾವತಿ ಮಾಡಬೇಕು. ಆದರೂ ಸುಮಾರು 9 ತಿಂಗಳು ಬಾಡಿಗೆ ಪಾವತಿ ಮಾಡುತ್ತಾರೆ ಎಂದು ಅವಕಾಶ ನೀಡಲಾಗಿತ್ತು. ಆದರೆ ಅವರು ಬಾಡಿಗೆ ಪಾವತಿ ಮಾಡಿಲ್ಲ. ತಾಪಂ ನೋಟೀಸು ನೀಡಿದರೂ ಅದಕ್ಕೆ ಸ್ಪಂದನೆ ಮಾಡಿಲ್ಲ. ಡೆಪಾಸಿಟ್ ಮಾಡಿರುವುದು ಕೇವಲ ಬಾಡಿಗೆ ಮುರಿದುಕೊಳ್ಳುವ ದೃಷ್ಟಿಯಿಂದಲ್ಲ. ಬಾಡಿಗೆಗೂ ಭದ್ರತಾ ಡೆಪಾಸಿಟಿಗೂ ಯಾವುದೇ ಸಂಬಂಧ ಇಲ್ಲ. ಏಲಂನಲ್ಲಿ ಅಂಗಡಿ ಪಡೆದುಕೊಂಡ ಪೂರ್ಣ ಅವಧಿಯಲ್ಲಿ ಬಾಡಿಗೆ ಪಾವತಿ ಮಾಡಿ ಮತ್ತೆ ಏಲಂನಲ್ಲಿ ಅಂಗಡಿ ಕೋಣೆ ಪಡೆದುಕೊಳ್ಳದಿದ್ದರೆ, ಡೆಪಾಸಿಟ್ ಹಣವನ್ನು ಪೂರ್ತಿಯಾಗಿ ಅವರಿಗೆ ವಾಪಾಸು ಮಾಡಲಾಗುವುದು. ನಾವು ಕಾನೂನು ಪ್ರಕಾರವೇ ಎಲ್ಲವನ್ನೂ ಮಾಡಿದ್ದೇವೆ. 3 ಬಾರಿ ನೋಟೀಸು ನೀಡಿದ್ದೇವೆ. ಹಣ ಪಾವತಿಗಾಗಿ ಬೇಕಾದಷ್ಟು ಸಮಯವನ್ನೂ ಕೊಟ್ಟಿದ್ದೇವೆ. ಆದರೆ ಅವರು ಸ್ಪಂದಿಸಿಲ್ಲ. ಹಾಗಾಗಿ ನಿಯಮ ಪ್ರಕಾರ ಅಂಗಡಿಕೋಣೆ ಏಲಂ ಮಾಡಿದ್ದೇವೆ. ಅವರ ವಸ್ತುಗಳನ್ನು ಪಡೆದುಕೊಳ್ಳಲು ನೋಟೀಸು ನೀಡಿದ್ದೇವೆ. ಅವರು ಬಂದಿಲ್ಲ. ಹಾಗಾಗಿ ಸುಮಾರು 7 ಸಾವಿರ ಮೌಲ್ಯದ ಅವರ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಗಿದೆ. ಒಂದು ವೇಳೆ ತಾಪಂ ತಪ್ಪು ಮಾಡಿದ್ದಾರೆ ಅನ್ನಿಸಿದರೆ ಅವರು ನ್ಯಾಯಾಲಯಕ್ಕೂ ಮೊರೆ ಹೋಗಬಹುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.