ಪುತ್ತೂರು : ಶ್ರದ್ದಾ ಕೇಂದ್ರಗಳ ಅಭಿವೃದ್ದಿಯಾದರೆ ಆ ಊರು ಸುಭಿಕ್ಷೆಯಾಗುತ್ತದೆ. ದೇವಾಲಯಗಳ ಬ್ರಹ್ಮಕಲಶೋತ್ಸವದಲ್ಲಿ ಪ್ರತಿಯೊಬ್ಬರು ಭಾಗವಹಿಸಿ ತನ್ನದೆ ಆದ ಸೇವೆ ನೀಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಬ್ರಹ್ಮಕಲಶೋತ್ಸವ ಗೌರವಾಧ್ಯಕ್ಷ, ಶಾಸಕ ಆಶೋಕ್ ಕುಮಾರ್ ರೈ ಹೇಳಿದರು.
ಅವರು ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧಾರ್ಮಿಕ ಕೇಂದ್ರಗಳಲ್ಲಿನ ನಿರಂತರ ಧಾರ್ಮಿಕ ಚಟುವಟಿಕೆ ಧರ್ಮದ ಉಳಿವಿಗೆ ಕಾರಣವಾಗುತ್ತದೆ. ಸನ್ಮಾರ್ಗದಲ್ಲಿ ನಡೆಯುತ್ತಾ ದೇವರ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡಾಗ ದೇವರು ಅನುಗ್ರಹಿಸುತ್ತಾನೆ ನಳೀಲು ಶ್ರೀ ಸುಬ್ರಹ್ಮಣ್ಯ ಬ್ರಹ್ಮಕಲಶೋತ್ಸವದಲ್ಲಿ ಹೆಚ್ಚಿನ ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಬ್ರಹ್ಮಶ್ರೀ ಕಾರ್ತಿಕ್ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ, ಭಕ್ತಿಯ ಮೂಲಕ ಆರಾಧನೆ ಮಾಡಿದವರಿಗೆ ದೇವರು ಅನುಗ್ರಹಿಸುತ್ತಾನೆ. ನಮ್ಮಲ್ಲಿ ನಂಬಿಕೆ, ಭಕ್ತಿ, ವಿಶ್ವಾಸ ಇದ್ದಾಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಎಲ್ಲಿ ಧಾರ್ಮಿಕತೆಯು ನೆಲೆಗೊಳ್ಳುತ್ತಿದೆಯೋ ಅಲ್ಲಿ ಭಯ ಭಕ್ತಿಯ ನೆಲೆಯಿರುತ್ತದೆ. ಆಧುನಿಕ ಯುಗದಲ್ಲಿ ನಮ್ಮ ಮಕ್ಕಳು ನಮ್ಮಿಂದ ಕೈ ತಪ್ಪುವ ಕಾಲ ಬಂದಿದೆ. ಮಾತೆಯರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು. ಗುರು ಹಿರಿಯರಿಗೆ ಗೌರವಿಸುವುದನ್ನು ಮೊದಲು ಕಲಿಸಬೇಕು. ಎಲ್ಲರನ್ನೂ ಸಮಾನ ಭಾವದಿಂದ ನೋಡುವುದೇ ಹಿಂದೂ ಧರ್ಮದ ಮೂಲ ಎಂದರು.
ಬ್ರಹ್ಮಶ್ರೀ ನಾಗೇಶ್ ತಂತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಡಾ.ಸುಚೇತ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಅಭಿವೃದ್ದಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ರೈ , ಪ್ರಧಾನ ಕಾರ್ಯದರ್ಶಿ ಸತೀಶ್ ರೈ, ಕೋಶಾಧಿಕಾರಿ ಮೋಹನ್‌ದಾಸ ರೈ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ರೈ, ನಾರಾಯಣ ರೈ ಮೊದೆಲ್ಕಾಡಿ, ಚಂದ್ರಶೇಖರ ರೈ, ಆಡಳಿತ ಸಮಿತಿ ಕಾರ್ಯದರ್ಶಿ ಪ್ರವೀಣ್ ಕುಮಾರ್ ರೈ, ಕೋಶಾಧಿಕಾರಿ ಡಾ.ಸುಚೇತ ಜೆ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.
ಡಾ.ನಿರೀಕ್ಷಾ ಶೆಟ್ಟಿ ಪ್ರಾರ್ಥಿಸಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ಸ್ವಾಗತಿಸಿದರು. ಪ್ರವೀಣ್ ರೈ ನಡುಕೂಟೇಲು ವಂದಿಸಿದರು. ಚಂದ್ರಾವತಿ ರೈ ಮತ್ತು ವಿನೋದ್ ಕುಮಾರ್ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ವೀಣಾ ಸಂತೋಷ್ ರೈ ನಳೀಲು,ಡಾ. ನಿರೀಕ್ಷಾ ವಿಘ್ನೇಶ್ ಶೆಟ್ಟಿ ಸಹಕರಿಸಿದರು.
ಬಳಿಕ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇವರಿಂದ ಕೊಲ್ಲೂರು ಮೂಕಾಂಬಿಕಾ ನೃತ್ಯ ರೂಪಕ ನಡೆಯಿತು.
ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 5.00ರಿಂದ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ ಚತುಃಶುದ್ಧಿ ಧಾರೆ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ಧಿ ಪ್ರೋಕ್ತ ಹೋಮ, ಸ್ಕಾಂದ ಪ್ರಾಯಶ್ಚಿತ ಹೋಮಗಳು ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ, ಶ್ರೀ ರಕೇಶ್ವರೀ ದೈವದ ಪುನಃ ಪ್ರತಿಷ್ಠೆ, ಕಲಶಾಭಿಷೇಕ ನಡೆಯಿತು. ಮಧ್ಯಾಹ್ನ ಗಂಟೆ 12.30ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಇಂದು ದೇವಸ್ಥಾನದಲ್ಲಿ : ಫೆ.19ರಂದು ಬೆಳಿಗ್ಗೆ ಉಷೆ ಪೂಜೆ,ಮಹಾಗಣಪತಿ ಪೂಜೆ, ಅಂಕುರಪೂಜೆ,ಸ್ವಶಾಂತಿ ,ಅದ್ಭುತ. ಶಾಂತಿ, ಚೋರ ಶಾಂತಿ, ಹೋಮಾದಿಗಳು, ಮಧ್ಯಾಹ್ನ ಹೋಮಗಳ ಕಲಶಾಭಿಷೇಕ,ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೀಪಾರಾಧನೆ,ಅಂಕುರ ಪೂಜೆ,ಕುಂಡ ಶುದ್ದಿ,ಮಹಾಪೂಜೆ ,ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿವಿಧ ಗಣ್ಯರು ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ಸುಧೀರ್ ಕಟ್ಟಪುಣಿ, ವೆಂಕಟರಮಣ ಆಚಾರ್ಯ, ಗೋಪಾಲ ಆಚಾರ್ಯ ನಳೀಲು, ಪದ್ಮನಾಭ ಶೇರಿಗಾರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ,ಮಣಿಕ್ಕರ ಸ.ಹಿ.ಪ್ರಾ.ಶಾಲೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ ಸುಸ್ವರ ಮೆಲೋಡಿಯಸ್ ಉಪ್ಪಿನಂಗಡಿ ಇವರಿಂದ ಭಕ್ತಿ-ಭಾವ-ಸಂಗಮ ,ರಾತ್ರಿ ಸಂಗಮ ಕಲಾವಿದರಿಂದ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.