ಪೆರ್ನೆ: ಕಳೆದ ಕೆಲವು ದಿನಗಳ ಹಿಂದೆ ಪೆರ್ನೆ ಜೀವನ್ ಜ್ಯೋತಿ ಅಂಗಡಿ ಮುಂಭಾಗದ ನೇಂಜ ಮಾರ್ಗದಲ್ಲಿ ಆಕಸ್ಮಿಕ ದುರ್ಮರಣಕ್ಕೀಡಾದ ನಾಗರ ಹಾವಿನ ಬಗ್ಗೆ ಪರಿಸರ ಕಲ್ಯಾಣ, ದೋಷ ತಡೆಗಾಗಿ ಸರ್ಪ ಸಂಸ್ಕಾರ ಪಿಂಡ ಪ್ರಧಾನ ಕ್ರಿಯೆ ಶುಕ್ರವಾರ ನಡೆಯಿತು.
ವಿದ್ವಾಂಸರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ಬೆಳಿಗ್ಗೆ 8:00 ಗಂಟೆಗೆ ಆರಂಭಿಸಿ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ನಂತರ ಅನ್ನ ಪ್ರಸಾದ ಸ್ವೀಕಾರದೊಂದಿಗೆ ಸಂಪನ್ನಗೊಂಡಿತು.
ಈ ಪುಣ್ಯ ಕ್ರಿಯೆಯಲ್ಲಿ ಗ್ರಾಮಸ್ಥರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ ವಲಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರು, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪಾಲ್ಗೊಂಡಿದ್ದರು.